ಬೆಂಗಳೂರು: 545 ಪಿ ಎಸ್ ಐ ಹುದ್ದೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಿಯನ್ನು ಪುಣೆಯಲ್ಲಿ ಬಂಧಿಸಲಾಗಿದೆ. ಪ್ರಕರಣದ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಯಲಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಕಾಂಗ್ರೆಸ್ ನವರು ಪ್ರಕರಣದಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸಿದರು. ಆದರೆ ಅವರದೇ ಪಕ್ಷದ ಪ್ರಮುಖರು ಸಿಕ್ಕಿ ಹಾಕಿಕೊಂಡಿದ್ದರಿಂದ ಸುಮ್ಮನಾಗಿದ್ದಾರೆ ಎಂದರು.
‘ಸ್ಟ್ರೆಚ್ ಮಾರ್ಕ್’ ಇಲ್ಲದ ತ್ವಚೆ ಪಡೆಯಲು ಹೀಗೆ ಮಾಡಿ
ಸಿಐಡಿ ಟೀಂ ಉತ್ತಮ ಕೆಲಸ ಮಾಡುತ್ತಿದೆ. ಪ್ರಕರಣದ ಹಲವು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಸಂಪೂರ್ಣ ತನಿಖೆ ನಡೆಯುತ್ತೆ. ಪ್ರಾಮಾಣಿಕರಿಗೆ ನ್ಯಾಯ ಕೊಡಿಸುವ ಬಗ್ಗೆ ಯೋಚಿಸಲಾಗುತ್ತಿದೆ. ತುಂಬಾ ಕಷ್ಟಪಟ್ಟು ಓದಿದವರಿಗೆ ಅನ್ಯಾಯವಾಗಬಾರದು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ನೀಡಬೇಕೆಂಬ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಇದೇ ವೇಳೆ ದಿವ್ಯಾ ಹಾಗರಗಿ ಜತೆಗಿನ ಫೋಟೋ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ನನ್ನ ಫೋಟೋ ತೋರಿಸಿ ಹೇಳಿಕೆ ಕೊಟ್ಟರು. ಈಗ ಅವರದ್ದೇ ಪಕ್ಷದ ಲೀಡರ್ ಗಳ ಜತೆ ದಿವ್ಯಾ ಫೋಟೋ ಹೊರಗೆ ಬಂದಿದೆ. ಈಗ ಏನು ಹೇಳುತ್ತಾರೆ? ಪ್ರಿಯಾಂಕ್ ಖರ್ಗೆ ಬಳಿ ದಾಖಲೆಗಳಿದ್ದರೆ ಅದನ್ನು ಈಗಲಾದರೂ ಸಿಐಡಿಗೆ ನೀಡಿ ತನಿಖೆಗೆ ಸಹಕರಿಸಲಿ. ಪಿ ಎಸ್ ಐ ಹುದ್ದೆ ಅಕ್ರಮದಲ್ಲಿ ಯಾರೇ ಭಾಗಿಯಾಗಿರಲಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಬೇಲ್ ಪಡೆದು ಹೊರ ಬರುವಂತಾಗಬಾರದು ಎಂಬುದೇ ನಮ್ಮ ಉದ್ದೇಶ. ಆ ನಿಟ್ಟಿನಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.