ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಎಸ್ಐಟಿ ತನಿಖೆ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ, ಲೋಕಸಭಾ ಚುನಾವಣೆ ಮುಗಿದ ಬಳಿಕ ವಿದೇಶಕ್ಕೆ ತೆರಳಿದ್ದು ಮೇ 3ರಂದು ವಾಪಸ್ ರಾಜ್ಯಕ್ಕೆ ಬರಲಿದ್ದಾರೆ ಎಂದು ತಿಳಿದು ಬಂದಿದೆ.
ಜರ್ಮನಿಯ ಫ್ರಾಂಕ್ ಪರ್ಟ್ ಗೆ ತೆರಳಿರುವ ಅವರು ಅಲ್ಲಿಗೆ ತೆರಳುವ ಸಂದರ್ಭದಲ್ಲಿಯೇ ಮೇ 3ಕ್ಕೆ ರಿಟರ್ನ್ ಟಿಕೆಟ್ ಮಾಡಿಸಿದ್ದರೆಂದು ಮೂಲಗಳು ತಿಳಿಸಿದ್ದು, ಅಂದು ಮಧ್ಯಾಹ್ನ 1:30ಕ್ಕೆ ಫ್ರಾಂಕ್ ಪರ್ಟ್ ಬಿಡಲಿರುವ ವಿಮಾನ, ಮಧ್ಯರಾತ್ರಿ 1 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ ಎಂದು ಹೇಳಲಾಗಿದೆ.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಗಳಾಗಿರುವ ಮಾಜಿ ಸಚಿವ ಎಚ್ ಡಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ತನಿಖೆಗಾಗಿ ತಮ್ಮ ಮುಂದೆ ಹಾಜರಾಗುವಂತೆ ಎಸ್ಐಟಿ ತಂಡ ಈಗಾಗಲೇ ನೋಟಿಸ್ ನೀಡಿದ್ದು, ವಿದೇಶದಿಂದ ಬಂದ ಬಳಿಕ ಪ್ರಜ್ವಲ್ ರೇವಣ್ಣ ತನಿಖಾ ತಂಡದ ಮುಂದೆ ಹಾಜರಾಗಲಿದ್ದಾರಾ ಎಂಬ ಕುತೂಹಲ ಮನೆ ಮಾಡಿದೆ.