ನವೆಂಬರ್ 18 ಮತ್ತು 19 ರಂದು ನಡೆಯಲಿರುವ 19 ನೇ ಗ್ರೂಪ್ ಆಫ್ ಟ್ವೆಂಟಿ (ಜಿ 20) ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಿಯೋ ಡಿ ಜನೈರೊಗೆ ಆಗಮಿಸಿದರು. ಇದು ಮೂರು ರಾಷ್ಟ್ರಗಳಿಗೆ ಅವರ ಐದು ದಿನಗಳ ಪ್ರವಾಸದ ಎರಡನೇ ಹಂತವಾಗಿದೆ.
ಶೃಂಗಸಭೆಯಲ್ಲಿ ವಿವಿಧ ವಿಶ್ವ ನಾಯಕರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ ಎಂದು ಪಿಎಂ ಮೋದಿ ಹೇಳಿದ್ದಾರೆ. ಕಳೆದ ವರ್ಷ ಶೃಂಗಸಭೆಯ ಆತಿಥ್ಯ ವಹಿಸಿದ್ದ ಭಾರತವು ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದೊಂದಿಗೆ ಜಿ 20 ತ್ರಿಕೋನದ ಭಾಗವಾಗಿರುವುದರಿಂದ ಈ ಭೇಟಿ ಮಹತ್ವದ್ದಾಗಿದೆ.
ಜಿ 20 ಬ್ರೆಜಿಲ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬ್ರೆಜಿಲ್ ನ ರೋಮಾಂಚಕ ನಗರ ರಿಯೊ ಡಿ ಜನೈರೊಗೆ ಬಂದಿಳಿದಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಎಕ್ಸ್ ನಲ್ಲಿ ಪೋಸ್ಟ್ ನಲ್ಲಿ ತಿಳಿಸಿದೆ.ವಿಮಾನ ನಿಲ್ದಾಣದಲ್ಲಿ ಮೋದಿಯವರ ಸ್ವಾಗತದ ಚಿತ್ರಗಳನ್ನು ಸಚಿವಾಲಯ ಹಂಚಿಕೊಂಡಿದೆ.