ನವದೆಹಲಿ: ರಾಜ್ಯದಲ್ಲಿ ಪಿ ಎಫ್ ಐ ಸಂಘಟನೆ ನಿಷೇಧ ಮಾಡುವ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುಳಿವು ನೀಡಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪಿ ಎಫ್ ಐ ಸಂಘಟನೆ ಚಟುವಟಿಕೆ ಮೇಲೆ ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿಯೂ ನಿಗಾ ಇಡಬೇಕಿದೆ. ಇಂಥಹ ಸಂಘಟನೆಗಳನ್ನು ರಾಷ್ಟ್ರಮಟ್ಟದಲ್ಲಿಯೇ ನಿಷೇಧಿಸಬೇಕು ಎಂಬ ಅಭಿಪ್ರಾಯ ಸಿಎಂ ಬಸವರಾಜ್ ಬೊಮ್ಮಾಯಿ ಅವರದ್ದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಗೃಹ ಇಲಾಖೆ ಜತೆ ಚರ್ಚೆ ನಡೆಸಲಾಗುವುದು ಎಂದರು.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಪ್ರಹ್ಲಾದ್ ಜೋಶಿ, ಕೃತ್ಯದ ಹಿಂದೆ ಪಿ ಎಫ್ ಐ, ಎಸ್ ಡಿ ಪಿ ಐ ಸಂಘಟನೆಗಳ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇಂಥಹ ಕೃತ್ಯ ನಡೆಸುವವರಿಗೆ ಕೇರಳದಲ್ಲಿ ರಕ್ಷಣೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಆರೋಪಿಸಿದರು.