ಮೀರತ್ : ರಸ್ತೆಗಳಲ್ಲಿ ನಮಾಜ್ ಮಾಡುವ ಜನರ ವಿರುದ್ಧ ಮೀರತ್ ಪೊಲೀಸರು ಗುರುವಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ನಿಯಮ ಉಲ್ಲಂಘಿಸುವವರು ಕಠಿಣ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ.
ಪಾಸ್’ಪೋರ್ಟ್ ಹಾಗೂ ಚಾಲನಾ ಪರವಾನಗಿಗಳನ್ನು ರದ್ದುಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈದ್-ಉಲ್-ಫಿತರ್ ಮತ್ತು ರಂಜಾನ್ ನ ಕೊನೆಯ ಶುಕ್ರವಾರದ ಪ್ರಾರ್ಥನೆಗೆ ಮುಂಚಿತವಾಗಿ ಮೀರತ್ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಸ್ಥಳೀಯ ಮಸೀದಿಗಳು ಅಥವಾ ಗೊತ್ತುಪಡಿಸಿದ ಈದ್ಗಾಗಳಲ್ಲಿ ಈದ್ ಪ್ರಾರ್ಥನೆಗಳನ್ನು ಸಲ್ಲಿಸಬೇಕು ಮತ್ತು ರಸ್ತೆಗಳಲ್ಲಿ ಯಾರೂ ನಮಾಜ್ ಮಾಡಬಾರದು ಎಂದು ಮೀರತ್ ಪೊಲೀಸ್ ವರಿಷ್ಠಾಧಿಕಾರಿ (ನಗರ) ಆಯುಷ್ ವಿಕ್ರಮ್ ಸಿಂಗ್ ಹೇಳಿದ್ದಾರೆ.
ಏತನ್ಮಧ್ಯೆ, ಮೀರತ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ವಿಪಿನ್ ಟಾಡಾ ಅವರು ಜಿಲ್ಲಾ ಮತ್ತು ಪೊಲೀಸ್ ಠಾಣೆ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗಿದೆ ಮತ್ತು ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿಗಳನ್ನು ಹರಡಲು ಅಥವಾ ಅಶಾಂತಿಯನ್ನು ಪ್ರಚೋದಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾವು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ತೀವ್ರ ನಿಗಾ ಇಟ್ಟಿದ್ದೇವೆ ಮತ್ತು ಕೋಮು ಸೌಹಾರ್ದತೆಯನ್ನು ಭಂಗಗೊಳಿಸುವ ಯಾವುದೇ ಪ್ರಯತ್ನವನ್ನು ದೃಢವಾಗಿ ಎದುರಿಸಲಾಗುವುದು” ಎಂದು ಆಯುಷ್ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.