ಬೆಂಗಳೂರು : ಬಿಜೆಪಿಯಿಂದ ನಮ್ಮ ಶಾಸಕರಿಗೆ 50 ಕೋಟಿ ಆಫರ್ ಬಂದಿದೆ,ಒಬ್ಬರಿಗೆ 50 ಕೋಟಿ ಆಫರ್ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬಿಜೆಪಿಯಿಂದ ನಮ್ಮ ಶಾಸಕನಿಗೆ 50 ಕೋಟಿ ಆಫರ್ ಬಂದಿದೆ, ರಾಜೀನಾಮೆ ನೀಡಿದ್ರೆ 50 ಕೋಟಿ ನೀಡ್ತೀವಿ ಎಂದು ಆಮಿಷವೊಡ್ಡಿದ್ದಾರೆ. ಬಿಜೆಪಿಯವರಿಗೆ ದುಡ್ಡು ಎಲ್ಲಿಂದ ಬರುತ್ತದೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಬಿಜೆಪಿಗರು ಹಾಳು ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಒಗ್ಗಟ್ಟಾಗಿ ಚುನಾವಣೆ ಎದುರಿಸಿದರೆ ಗೆಲುವು ಖಚಿತ
ನಾವು ನಡೆಸಿರುವ ಎಲ್ಲಾ ಸಮೀಕ್ಷೆಗಳಲ್ಲೂ ಬೆಳಗಾವಿಯಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಒಗ್ಗಟ್ಟಾಗಿ ಚುನಾವಣೆ ಮಾಡಿದರೆ ಉತ್ತರ ಕನ್ನಡ ಜಿಲ್ಲೆ ಸೇರಿ ಬೆಳಗಾವಿಯ ಜಿಲ್ಲೆಗಳಿಗೆ ಒಳಪಡುವ ಮೂರೂ ಲೋಕಸಭಾ ಕ್ಷೇತ್ರಗಳಲ್ಲೂ ಖಚಿತವಾಗಿ ಗೆಲುವು ಸಾಧಿಸಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಐದು ಗ್ಯಾರಂಟಿ ಯೋಜನೆಗಳು ಬೆಳಗಾವಿ ಜಿಲ್ಲೆಯ ಲಕ್ಷಾಂತರ ಕುಟುಂಬಗಳ ಮತ್ತು ಮಹಿಳೆಯರ ಬದುಕಿನ ಸಂಕಟವನ್ನು ಕಡಿಮೆ ಮಾಡಿವೆ. ಇದಕ್ಕಾಗಿ ಯುವತಿಯರು ಮತ್ತು ಮಹಿಳೆಯರು ಶೇ.80 ರಷ್ಟು ನಮ್ಮ ಪರವಾಗಿ ಇದ್ದಾರೆ ಎನ್ನುವ ಸಕಾರಾತ್ಮಕ ವರದಿ ಸಮೀಕ್ಷೆಗಳಿಂದ ಹೊರ ಬಂದಿವೆ.
ನಾವು ಜನರ ಮನೆ ಬಾಗಿಲಿಗೆ ಹೋಗಿ ಪ್ರತೀ ತಿಂಗಳು ಪ್ರತೀ ಕುಟುಂಬಕ್ಕೆ 5-6 ಸಾವಿರ ರೂಪಾಯಿ ಕೊಡುತ್ತಿರುವ ಮತ್ತು ವರ್ಷಕ್ಕೆ 50-60 ಸಾವಿರ ಪ್ರತಿ ಕುಟುಂಬದ ಖಾತೆಗೆ ಜಮೆ ಆಗುತ್ತಿರುವುದನ್ನು ಮನವರಿಕೆ ಮಾಡಿಸಿ, ಜನರ ನಡುವೆ ನಿಲ್ಲಬೇಕು. ಆಗ ನಮ್ಮ ಗೆಲುವು ನಿಶ್ಚಿತ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.