ಬೆಂಗಳೂರು : ಪತ್ನಿಗೆ ‘ಮೂಡಾ’ ಸೈಟ್ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಇದು ಬಿಜೆಪಿಯವರ ಕಾಲದಲ್ಲೇ ಆಗಿತ್ತು. ನನ್ನ ಹೆಂಡತಿಗೆ ಹಿಂದೆ ಸೈಟ್ ಹಂಚಲಾಗಿತ್ತು. 1 ಎಕರೆ 15 ಗುಂಟೆ ನನ್ನ ಹೆಂಡತಿ ಹೆಸರಲ್ಲಿರುವ ಜಮೀನು, ನನ್ನ ಬಾಮೈದ ತಗೊಂಡಿದ್ದ ಅದನ್ನು ನನ್ನ ಹೆಂಡತಿಗೆ ಕೊಟ್ಟಿದ್ದಾನೆ. ನಾನು ಅಧಿಕಾರದಲ್ಲಿ ಇದ್ದಾಗ ತಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಬಾಮೈದ ಅರಿಶನ ಕುಂಕಮ ರೀತಿಯಲ್ಲಿ ಗಿಫ್ಟ್ ಕೊಟ್ಟು ಬಿಟ್ಟ, ಆದರೆ ಅದನ್ನು ಮೂಡದವರು ನಮ್ಮ ಜಮೀನನ್ನು ಸೈಟ್ ಮಾಡಿ ಹಂಚಿಬಿಟ್ಟರು. ಇದರಿಂದ ನಮಗೆ ಜಮೀನು ಇಲ್ಲದೆ ಹಾಗೇ ಆಗೋಯ್ತು, ಅದಕ್ಕೆ ಮೂಡದವರು ನಿಮಗೆ 50-50 ಕೊಡ್ತೀವಿ ಎಂದಿದ್ದರು. ಅದಕ್ಕೆ ಬೇರೆ ಕಡೆ ಜಮೀನು ಕೊಟ್ಟಿದ್ದಾರೆ, ಇದು ತಪ್ಪಾ? ಕಾನೂನಿನ ಪ್ರಕಾರ ನಮಗೆ ಜಮೀನು ಹಂಚಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಗೋಲ್ಮಾಲ್ ಸಿಎಂ
ಗೋಲ್ಮಾಲ್ ಸಿಎಂ ಸಿದ್ದರಾಮಯ್ಯನವರೇ, ತಮ್ಮ ಧರ್ಮ ಪತ್ನಿ ಅವರ ಹೆಸರಿನಲ್ಲೂ ನಿಯಮ ಬಾಹಿರವಾಗಿ ನಿವೇಶನ ವರ್ಗಾವಣೆ ಆಗಿರುವ ಸುದ್ದಿ ಹೊರಬಂದಿದೆಯಲ್ಲ ಇದನ್ನ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ? ಎಂದು ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್ ಅಶೋಕ್ ಟಾಂಗ್ ನೀಡಿದ್ದಾರೆ.