ಬೆಂಗಳೂರು: ಎಂಇಎಸ್ ಪುಂಡಾಟ ಪ್ರಕರಣ ಇದೀಗ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಎಂಇಎಸ್ ಪುಂಡಾಟದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಬೆಳಗಾವಿ ಘಟನೆಯ ಬಗ್ಗೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಆದರೆ ರಾಜ್ಯ ಕಾಂಗ್ರೆಸ್ ಗೊಂದಲದ ಗೂಡಾಗಿದೆ. ವಿಪಕ್ಷ ನಾಯಕ ಎಂಇಎಸ್ ಬಗ್ಗೆ ಕಠಿಣ ನಿಲುವು ತಾಳಿದ್ದರೆ, ಕೆಪಿಸಿಸಿ ಅಧ್ಯಕ್ಷರು ಮೃದು ಧೋರಣೆ ಹೊಂದಿದ್ದಾರೆ. ಬೆಳಗಾವಿ ಭಾಗದಲ್ಲಿ ಪ್ರಭಾವಿಯಾಗಿರುವ ಕಾಂಗ್ರೆಸ್ ಶಾಸಕಿಯ ಮಾತನ್ನು ಡಿ.ಕೆ.ಶಿವಕುಮಾರ್ ಪಾಲಿಸುತ್ತಿದ್ದಾರೆಯೇ? ಎಂದು ರಾಜ್ಯ ಬಿಜೆಪಿ ಘಟಕ ಪ್ರಶ್ನಿಸಿದೆ.
ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯನವರೇ, ಡಿ.ಕೆ.ಶಿವಕುಮಾರ್ ಎಂಇಎಸ್ ಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಅಧಿವೇಶನದಲ್ಲಿ ಚರ್ಚೆ ಆರಂಭಿಸುವುದಕ್ಕೂ ಮುನ್ನ ಒಮ್ಮೆ ನಿಮ್ಮ ರಾಷ್ಟ್ರೀಯ ಅಧ್ಯಕ್ಷರ ಜೊತೆಗೂ ಚರ್ಚೆ ಮಾಡಿಬಿಡಿ. ನಾಡು, ನುಡಿಯ ವಿಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷರ ದ್ವಂದ್ವ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅಧಿವೇಶನದಲ್ಲಿ ಎಂಇಎಸ್ ಗೆ ಕ್ಲೀನ್ ಚಿಟ್ ನೀಡಲು ನೀವೂ ಸಿದ್ಧರಿದ್ದೀರಾ? ಎಂದು ಕೇಳಿದೆ.
ಇದು ಕಾಂಗ್ರೆಸ್ ಪ್ರತಿಪಾದಿಸುತ್ತಿರುವ ಕ್ರಿಯೆ ಮತ್ತು ಪ್ರತಿಕ್ರಿಯೆಗೆ ಉದಾಹರಣೆ. ಬೆಳಗಾವಿಯಲ್ಲಿ ಎಂಇಎಸ್ ಭಾಷಾ ಸೌಹಾರ್ದತೆ ಕೆಡಿಸುವುದು ಕ್ರಿಯೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಕ್ಲೀನ್ ಚಿಟ್ ನೀಡುವುದು ಪ್ರತಿಕ್ರಿಯೆ ಎಂದು ಕಿಡಿಕಾರಿದೆ.