ಬೆಳಗಾವಿ: ಎಂಇಎಸ್ ಪುಂಡರ ವಿರುದ್ಧ ದೇಶದ್ರೋಹ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಎಂಇಎಸ್ ಪುಂಡಾಟಿಕೆ ಪ್ರಕರಣ ಪ್ರತಿಧ್ವನಿಸಿದ್ದು, ಎಂಇಎಸ್ ನಿಷೇಧ, ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೊಳಿಸುವಂತೆ ಪಕ್ಷಾತೀತವಾಗಿ ಒತ್ತಾಯಗಳು ಕೇಳಿ ಬಂದವು. ಎಂಇಎಸ್ ಪುಂಡರ ವಿರುದ್ಧ ಖಂಡನಾ ನಿರ್ಣಯ ಮಂಡಿಸಿದ ಸಿಎಂ ಬೊಮ್ಮಾಯಿ, ಭಾಷೆ ನೆಪದಲ್ಲಿ ಶಾಂತಿ ಕದಡಲು ಯತ್ನಿಸಿದವರ ವಿರುದ್ಧ ಗೂಂಡಾ ಕಾಯ್ದೆ, ದೇಶದ್ರೋಹದ ಕೇಸ್ ದಾಖಲಿಸಲಾಗುವುದು ಎಂದು ತಿಳಿಸಿದರು.
ಎಂಇಎಸ್ ಪುಂಡಾಟಿಕೆ ವಿರುದ್ಧ ಸರ್ವಾನುಮತದ ಖಂಡನಾ ನಿರ್ಣಯ ಅಂಗೀಕಾರ: ದೇಶದ್ರೋಹದ ಕೇಸ್ ದಾಖಲು; ಸಿಎಂ ಗುಡುಗು
ಬಸವೇಶ್ವರ, ಶಿವಾಜಿ ಪ್ರತಿಮೆಗಳಿಗೆ ಅವಮಾನ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಇಂತಹ ಕೃತ್ಯಗಳನ್ನು ಸದನ ಖಂಡಿಸುತ್ತದೆ. ಇದನ್ನು ಇಲ್ಲಿಗೆ ಬಿಡುವುದಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜತೆಯೂ ಚರ್ಚಿಸುತ್ತೇವೆ. ಎಂಇಎಸ್ ಬ್ಯಾನ್ ಮಾಡಲು ಆಗದಿದ್ದರೂ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದ ಗಡಿಗಳ ಅಭಿವೃದ್ಧಿಗೆ ಸರ್ಕಾರ ಸದಾ ಸಿದ್ಧವಿದೆ. ಸುವರ್ಣಸೌಧದ ಪ್ರಮುಖ ಸ್ಥಾನಗಳಲ್ಲಿ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಘೋಷಿಸಿದರು.
ಎಂಇಎಸ್ ವಿರುದ್ಧದ ಖಂಡನಾ ನಿರ್ಣಯವನ್ನು ಸದನ ಸರ್ವಾನುಮತದಿಂದ ಅಂಗೀಕರಿಸಿದೆ.