ಡಿಜಿಟಲ್ ಡೆಸ್ಕ್ : ದುಬೈ ಚಿನ್ನ ಸ್ಮಗ್ಲಿಂಗ್ ನಲ್ಲಿ ಹಲವು ಕಿರುತೆರೆ, ಹಿರಿತೆರೆ ನಟಿಯರು ಭಾಗಿಯಾಗಿದ್ದಾರೆ ಎಂಬ ಸ್ಪೋಟಕ ಸಂಗತಿ ಡಿ ಆರ್ ಐ (DRI) ತನಿಖೆಯಲ್ಲಿ ಬಯಲಾಗಿದೆ.
ನಟಿ ರನ್ಯಾರಾವ್ ಚಿನ್ನ ಸ್ಮಗ್ಲಿಂಗ್ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಹಲವು ಸ್ಪೋಟಕ ಮಾಹಿತಿಗಳು ಬಯಲಾಗುತ್ತಿದೆ. ದುಬೈ ಚಿನ್ನ ಸ್ಮಗ್ಲಿಂಗ್ ನಲ್ಲಿ ಹಲವು ಕಿರುತೆರೆ, ಹಿರಿತೆರೆ ನಟಿಯರನ್ನು ಬಳಸಿಕೊಳ್ಳಲಾಗುತ್ತಿದೆ. ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುವ ಜಾಲವೊಂದು ಸಕ್ರಿಯವಾಗಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ.
ಕಳೆದ ಕೆಲವು ವರ್ಷಗಳಿಂದ ದುಬೈಗೆ ಪ್ರವಾಸ ಹೋಗಿದ್ದ ನಟಿಯರ ಪಟ್ಟಿಯನ್ನು ಡಿ ಆರ್ ಐ ಅಧಿಕಾರಿಗಳು ತಯಾರಿಸಿದ್ದು, ನಟಿಯರ ಆರ್ಥಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಸದ್ಯದಲ್ಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಕೂಡ ಇದೆ.
ಪ್ರಭಾವಿ ಸ್ವಾಮೀಜಿ ಕೈವಾಡ…?
ಚಿನ್ನಕಳ್ಳಸಾಗಾಣೆ ಪ್ರಕರಣದ ತನಿಖೆಯನ್ನು ಡಿ ಆರ್ ಐ ಮತ್ತು ಸಿಬಿಐ ಅಧಿಕಾರಿಗಳು ನಡೆಸುತ್ತಿದ್ದು, ದಿನದಿಂದ ದಿನಕ್ಕೆ ಸ್ಪೋಟಕ ಮಾಹಿತಿ ಬಯಲಾಗುತ್ತಿದೆ. ನಟಿ ರನ್ಯಾರಾವ್ ಚಿನ್ನಕಳ್ಳಸಾಗಾಣೆ ಪ್ರಕರಣದಲ್ಲಿ ಪ್ರಭಾವಿ ಸ್ವಾಮೀಜಿಯ ಕೈವಾಡ ಇದೆ ಎನ್ನಲಾಗಿದೆ. ಈ ಸ್ವಾಮೀಜಿಗೆ ರಾಜಕೀಯ ನಾಯಕರ ನಿಖರ ಸಂಪರ್ಕವಿದೆ, ದುಬೈನಲ್ಲಿ ಆಫೀಸ್ ಇಟ್ಟುಕೊಂಡು ಸ್ವಾಮೀಜಿ ಡೀಲ್ ಮಾಡುತ್ತಿದ್ದರು ಎನ್ನಲಾಗಿದೆ. ಆಫೀಸ್ ನಲ್ಲಿ ಸ್ವಾಮೀಜಿ ಕ್ರಿಪ್ಟೋ ಕರೆನ್ಸಿ, ಹಣ ವಿನಿಮಯ ಮಾಡುತ್ತಿದ್ದರು.ಅಲ್ಲದೇ ಬೆಂಗಳೂರಿನಲ್ಲಿ ಸ್ವಾಮೀಜಿ ಮನೆ ಮೇಲೆ ಡಿ ಆರ್ ಐ ಅಧಿಕಾರಿಗಳು ದಾಳಿ ನಡೆಸಿದಾಗ ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿತ್ತು.