ಬಳ್ಳಾರಿ : ನಗರದ ಸುಧಾ ಕ್ರಾಸ್ ಬಳಿಯ ಪ್ರಾದೇಶಿಕ ಸಾರಿಗೆ ಕಚೇರಿಗೆ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಹಾಗೂ ಬಳ್ಳಾರಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡವು ಗುರುವಾರ ಸಂಜೆ ದಿಢೀರ್ ದಾಳಿ ನಡೆಸಿ ಕಚೇರಿಯ ವಿವಿಧ ಕಡತಗಳನ್ನು ಪರಿಶೀಲನೆ ಮಾಡಿದರು.
ಕಚೇರಿಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಹಾಜರಾತಿ ಪುಸ್ತಕ, ಚಲನ-ವಲನ ವಹಿ ಹಾಗೂ ನಗದು ಘೋಷಣಾ ವಹಿ ಪುಸ್ತಕಗಳನ್ನು ಪರಿಶೀಲಿಸಿದರು.
ನಗದು ಘೋಷಣಾ ವಹಿ ಎಂದರೇನು? ಎಂದು ಅಧಿಕಾರಿಗಳಿಗೆ ವಿಚಾರಿಸಿದರು. ಬೆಳಿಗ್ಗೆ ಕಚೇರಿಗೆ ಬರುವಾಗ ಒಬ್ಬ ಅಧಿಕಾರಿ ಅಥವಾ ಸಿಬ್ಬಂದಿ ತನ್ನಲ್ಲಿ ಎಷ್ಟು ನಗದು ಹಣ ಇದೆ ಎಂದು ನಮೂದಿಸಬೇಕು, ಬಳಿಕ ಸಂಜೆ ಮನೆಗೆ ತೆರಳುವಾಗ ಇದ್ದ ನಗದು ಹಣದ ಮಾಹಿತಿಯನ್ನು ತಪ್ಪದೇ ನಮೂದಿಸಬೇಕು ಎಂದು ತಿಳಿಸಿದರು.
ಬಳಿಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಕಚೇರಿ ಅಧೀಕ್ಷಕರ ಮೊಬೈಲ್ ನಲ್ಲಿನ ಫೋನ್ ಪೇ ಮತ್ತು ಗೂಗಲ್ ಪೇ ನಲ್ಲಿನ ಹಣಕಾಸು ವಹಿವಾಟಿನ ಬಗ್ಗೆ ಪರಿಶೀಲನೆ ನಡೆಸಿದರು. ಇದೇ ವೇಳೆ ಬ್ಯಾಂಕ್ ಖಾತೆಯ ವಹಿವಾಟಿನ ದಾಖಲೆ ಪ್ರತಿ ನೀಡಬೇಕು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ.ವಿ.ಜೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರಾದ ಕೆ.ಎಂ.ರಾಜಶೇಖರ್, ಸಹಾಯಕ ನಿಬಂಧಕರಾದ ಶುಭವೀರ್ ಜೈನ್.ಬಿ., ಉಪ ನಿಬಂಧಕರಾದ ಅರವಿಂದ.ಎನ್.ವಿ., ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಯೂ ಆದ ರಾಜೇಶ್ ಎನ್.ಹೊಸಮನೆ, ಬಳ್ಳಾರಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿ.ಸಿದ್ಧರಾಜು, ಡಿವೈಎಸ್ಪಿ ವಸಂತ ಕುಮಾರ್ ಸೇರಿದಂತೆ ಬಳ್ಳಾರಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಮತ್ತಿತರರು ಹಾಜರಿದ್ದರು.