ಮಂಗಳೂರು ನಗರ ಕಮಿಷನರೇಟ್ ಪೊಲೀಸರು ಮತ್ತು ಹಾಸನ ಜಿಲ್ಲಾ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಕೃತ್ಯ ನಡೆದ ಐದು ಗಂಟೆಯೊಳಗಾಗಿ ಬಂಧಿಸಲಾಗಿದೆ. ಅಲ್ಲದೆ ಈ ಆರೋಪಿಗಳು ವೃದ್ಧ ದಂಪತಿಯಿಂದ ದೋಚಿದ್ದ ಲಕ್ಷಾಂತರ ರೂ. ಮೌಲ್ಯದ ನಗ – ನಗದನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ವಿವರ: ಮಂಗಳೂರು ನಗರ ಉರ್ವ ಠಾಣೆ ವ್ಯಾಪ್ತಿಯ ದೇರೆಬೈಲು ಗ್ರಾಮದ ಕೋಟೆಕಣಿ ರಸ್ತೆಯ ಬಳಿ ವಾಸವಾಗಿದ್ದ ವೃದ್ಧ ದಂಪತಿ ಮನೆಗೆ ಮಂಗಳವಾರ ಬೆಳಿಗ್ಗೆ ನಾಲ್ಕು ಗಂಟೆ ಸುಮಾರಿಗೆ ನುಗ್ಗಿದ್ದ ಮಧ್ಯಪ್ರದೇಶದ ಕುಖ್ಯಾತ ಚಡ್ಡಿ ಗ್ಯಾಂಗ್ ಸದಸ್ಯರಾದ ರಾಜು ಸಿಂಘಾನಿಯಾ, ವಿಕ್ಕಿ, ಮಯೂರ್ ಹಾಗೂ ಬಾಲಿ ಎಂಬ ನಾಲ್ವರು ಆರೋಪಿಗಳು, ಅವರನ್ನು ಬೆದರಿಸಿ 12 ಲಕ್ಷ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, 3000 ನಗದು, ಮೊಬೈಲ್ ಹಾಗೂ 10 ಬ್ರಾಂಡೆಡ್ ಕೈ ಗಡಿಯಾರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಏಕಾಏಕಿ ನಡೆದ ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದ ವಿಕ್ಟರ್ ಮೆಂಡೋನ್ಸಾ ಹಾಗೂ ಪ್ಯಾಟ್ರಿಸಿಯಾ ಮೆಂಡೋನ್ಸಾ ದಂಪತಿ, ಪಕ್ಕದ ಮನೆಯವರ ನೆರವಿನಿಂದ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಕಾರ್ಯಾಚರಣೆಗಿಳಿದ ಪೊಲೀಸರು, ಆರೋಪಿಗಳು ದಂಪತಿಗೆ ಸೇರಿದ್ದ ಕಾರಿನಲ್ಲೇ ಪರಾರಿಯಾಗಿದ್ದ ಮಾಹಿತಿ ಪಡೆದು ಈ ಕಾರನ್ನು ಮುಲ್ಕಿ ಬಸ್ ನಿಲ್ದಾಣದ ಸಮೀಪ ಪತ್ತೆ ಮಾಡಿದ್ದರು. ಸಿಸಿಟಿವಿ ಪರಿಶೀಲಿಸಿದ ವೇಳೆ ನಾಲ್ವರು ಆರೋಪಿಗಳು ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಮಂಗಳೂರಿಗೆ ಪ್ರಯಾಣಿಸಿದ್ದು ಕಂಡುಬಂದಿತ್ತು.
ಬಳಿಕ ಬಸ್ ನಿರ್ವಾಹಕ ನೀಡಿದ ಮಾಹಿತಿ ಮೇರೆಗೆ ಈ ಆರೋಪಿಗಳ ತಂಡ ಬೆಂಗಳೂರಿಗೆ ಹೋಗುವ ಬಸ್ಸಿನಲ್ಲಿ ತೆರಳಿದ್ದ ಮಾಹಿತಿ ಅರಿತು ಹಾಸನ ಪೊಲೀಸರಿಗೆ ವಿಷಯ ತಿಳಿಸಲಾಗಿತ್ತು. ಅಂತಿಮವಾಗಿ ಸಕಲೇಶಪುರ ಸಮೀಪ ಆರೋಪಿಗಳು ಪ್ರಯಾಣಿಸುತ್ತಿದ್ದ ಬಸ್ಸನ್ನು ಅಡ್ಡಗಟ್ಟಿದ ಹಾಸನ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ಆರೋಪಿಗಳ ಬಳಿಯಿಂದ ಅವರು ದರೋಡೆ ಮಾಡಿದ್ದ ನಗ – ನಗದು ಹಾಗೂ ಕೈಗಡಿಯಾರಗಳನ್ನು ವಶಕ್ಕೆ ಪಡೆಯಲಾಗಿದೆ.