ಮಂಡ್ಯ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ಸಂಘರ್ಷ ಮುಂದುವರೆದಿದ್ದು, ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಅಂಬರೀಶ್ ಮೃತಪಟ್ಟ ಸಂದರ್ಭದಲ್ಲಿ ನಾನು ಸಿಎಂ ಆಗಿಲ್ಲದಿದ್ದರೆ ಏನಾಗುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಅಂದು ಅಂಬರೀಶ್ ಪಾರ್ಥೀವ ಶರೀರ ಮಂಡ್ಯಕ್ಕೆ ತೆಗೆದುಕೊಂಡು ಹೋಗುವುದೇ ಬೇಡ ಎಂದು ಹೇಳಿದ್ದರು. ಆದರೆ ನಾನೇ ಅಂಬರೀಶ್ ಅವರ ಹುಟ್ಟೂರಿಗೆ ತೆಗೆದುಕೊಂಡು ಹೋಗಬೇಕಾಗುತ್ತೆ ಎಂದು ಹೇಳಿ ಹೆಲಿಕಾಪ್ಟರ್ ವ್ಯವಸ್ಥೆಯನ್ನು ಮಾಡಿಸಿದ್ದೆ. ಈಗ ಹೊಸ ರೀತಿಯ ನಾಟಕವಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಈಗ ವಿಷ್ಣುವರ್ಧನ್ ಸ್ಮಾರಕ ವಿಚಾರ ಏನಾಯಿತು. ಈವರೆಗೂ ಸ್ಮಾರಕ ನಿರ್ಮಾಣ ಮಾಡಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸರ್ಕಾರದವರು ಈವರೆಗೆ ಏನಾದರೂ ಮಾಡಿದರಾ? ಅಂಬರೀಶ್ ಸತ್ತಾಗ ನಾನಿಲ್ಲದಿದ್ದರೆ ಅಂದು ಏನಾಗುತ್ತಿತ್ತು ಗೊತ್ತು. ಸುಮಲತಾ ವಿಶೇಷ ಮಹಿಳೆ. ಹಾಗಾಗಿ ಅರಂತಹ ವಿಶೇಷ ಮಹಿಳೆ ಬಗ್ಗೆ ಮಾತನಾಡುವುದು ಬೇಡ ಎಂದು ವ್ಯಂಗ್ಯವಾಡಿದರು.
ನಾನು ಸಿಎಂ ಆಗಿದ್ದಾಗ ಅಕ್ರಮ ಗಣಿಗಾರಿಕೆಯನ್ನು ಬಂದ್ ಮಾಡಿಸಿದ್ದೇ ನಾನು. ನಿಷೇಧಾಜ್ಞೆಯನ್ನು ಜಾರಿ ಮಾಡಿ ಕ್ರಮ ಕೈಗೊಂಡಿದ್ದೆ. ಈಗ ಕಳೆದ ನಾಲ್ಕು ತಿಂಗಳಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ಸಚಿವರೇ ಸ್ಪಷ್ಟಪಡಿಸಿದ್ದಾರೆ. ಮೈಸೂರು ಸಂಸದರೂ ಈ ಬಗ್ಗೆ ಸುದೀರ್ಘ ಹೇಳಿಕೆ ಕೊಟ್ಟಿದ್ದಾರೆ. ಆದರೂ ಕೂಡ ಇವರು ಪರಿಶೀಲನೆಗೆಂದು ಹೋಗಿದ್ದಾದರೂ ಯಾಕೆ ಎಂದು ಪ್ರಶ್ನಿಸಿದರು.
ಇನ್ನು ಕೆ.ಆರ್.ಎಸ್. ಬಿರುಕು ವಿಚಾರವಾಗಿ ಇನ್ನೂ 100 ವರ್ಷವಾದರೂ ಕೆ.ಆರ್.ಎಸ್. ಡ್ಯಾಂಗೆ ಏನೂ ಆಗಲ್ಲ. ವಿಶೇಶ್ವರಯ್ಯನವರು ಕಟ್ಟಿರುವ ಡ್ಯಾಂ ಸುರಕ್ಷಿತವಾಗಿದೆ ಎಂದು ಹೇಳಿದರು.