ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಬೆಳಗಾವಿ ಜಿಲ್ಲೆ ಗೋಕಾಕ್ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ 9 ಜನರನ್ನು ಬಂಧಿಸಿದ್ದು, ಇದೀಗ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಮೂಲಕ ಕೆಪಿಟಿಸಿಎಲ್ ಪರೀಕ್ಷಾ ಅಕ್ರಮದಲ್ಲಿ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಬಂಧಿತರನ್ನು ನಾಗನೂರ, ಮಡಿವಾಳಪ್ಪ ತೋರಣಗಟ್ಟಿ ಹಾಗೂ ಶಂಕರ ಉಣಕಲ್ ಎಂದು ಗುರುತಿಸಲಾಗಿದೆ. ಮಡಿವಾಳಪ್ಪ ಹಾಗೂ ಶಂಕರ ಉಣಕಲ್ ಇಬ್ಬರು ಸಂಬಂಧಿಗಳಾಗಿದ್ದಾರೆ.
ಗದಗ ಮುನ್ಸಿಪಲ್ ಪಿಯು ಕಾಲೇಜಿನಿಂದ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು. ಅತಿಥಿ ಉಪನ್ಯಾಸಕ ನಾಗನೂರಿ ಎಂಬಾತ ಹುಕ್ಕೇರಿ ತಾಲೂಕಿನ ಶಿರಹಟ್ಟಿ ಬಿ.ಕೆ ಗ್ರಾಮದ ತೋಟದ ಮನೆಯಲ್ಲಿ ಉತ್ತರ ಸಿದ್ಧಪಡಿಸುತ್ತಿದ್ದ. ಹೀಗೆ ಉತ್ತರ ಸಿದ್ಧಪಡಿಸಿ ಕಿಂಗ್ ಪಿನ್ ಸಂಜು ಭಂಡಾರಿ ಸೇರಿದಂತೆ ಇತರರಿಗೆ ರವಾನಿಸುತ್ತಿದ್ದ. ಬ್ಲ್ಯೂ ಟೂಥ್ ಡಿವೈಸ್ ಮೂಲಕ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ತಲುಪಿಸಲಾಗುತ್ತಿತ್ತು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.