ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಸಿಎಎಗೆ ತಡೆ ನೀಡಲು ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಾರ್ಚ್ 19 ರಂದು ಕೈಗೆತ್ತಿಕೊಳ್ಳಲಿದೆ.
ಸಿಎಎ ಮಾರ್ಚ್ 11 ರಂದು ಜಾರಿಗೆ ಬಂದಿದ್ದು, ಈ ಮೂಲಕ 2014 ರ ಡಿಸೆಂಬರ್ 31 ಕ್ಕಿಂತ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಾದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಸರ್ಕಾರ ಈಗ ಭಾರತೀಯ ಪೌರತ್ವವನ್ನು ನೀಡಲು ಪ್ರಾರಂಭಿಸುತ್ತದೆ.
ಸಂವಿಧಾನದ 131 ನೇ ವಿಧಿಯ ಅಡಿಯಲ್ಲಿ ರಾಜ್ಯವು ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಮೂಲ ದಾವೆಯನ್ನು ಸಲ್ಲಿಸಿದೆ. ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯಡಿ ನಿಯಮಗಳನ್ನು ಸೂಚಿಸಿದ್ದರಿಂದ ರಾಜ್ಯವು (ಈಗ) ಸುಪ್ರೀಂ ಕೋರ್ಟ್ ಮೂಲಕ ಮುಂದಿನ ಕಾನೂನು ಕ್ರಮಕ್ಕೆ ಸಜ್ಜಾಗುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇರಳದಲ್ಲಿ ಜಾರಿಗೆ ತರುವುದಿಲ್ಲ ಎಂಬುದು ಸರ್ಕಾರದ ನಿಲುವು” ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.