ಕೋಲಾರ: ಕೋಲಾರದಲ್ಲಿ ಈ ಬಾರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬಣದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇನ್ನಷ್ಟು ಧೈರ್ಯ, ಹುರುಪು ಹೆಚ್ಚಿದ್ದು, ಸಂಸದ ಕೆ.ಹೆಚ್.ಮುನಿಯಪ್ಪ ಹಾಗೂ ರಮೇಶ್ ಕುಮಾರ್ ವಿರುದ್ಧವೇ ತಿರುಗಿಬಿದ್ದಿದ್ದಾರೆ.
ಕೋಲಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕೆ.ಹೆಚ್.ಮುನಿಯಪ್ಪ ಕಾರ್ಯಕರ್ತರ ಸಭೆಯಲ್ಲಿ ಇಂದು ಹೈಡ್ರಾಮವೇ ನಡೆದಿದ್ದು, ಕೋಲಾರದಲ್ಲಿ ಸಿದ್ದರಾಮಯ್ಯನವರೇ ಸ್ಪರ್ಧೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಸಭೆಯಲ್ಲಿ ಸಿದ್ದರಾಮಯ್ಯ ಪರ ಘೋಷಣೆ ಕೂಗಿದ ಮುನಿಯಪ್ಪ ಬೆಂಬಲಿಗರು ಹಾಗೂ ರಮೇಶ್ ಕುಮಾರ್ ಬೆಂಬಲಿಗರು, ನಿಮ್ಮಿಬ್ಬರ ನಡುವಿನ ಬಿರುಕಿನಿಂದಾಗಿಯೇ ಜಿಲ್ಲಾ ಕಾಂಗ್ರೆಸ್ ನಲ್ಲಿ ಬಿರುಕು ಉಂಟಾಗಿದೆ. ನಿಮ್ಮ ಜಗಳದಿಂದಾಗಿಯೇ ಸಿದ್ದರಾಮಯ್ಯ ಕ್ಷೇತ್ರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕೂಗಾಟ ಶುರು ಮಾಡಿದ್ದಾರೆ. ಇದೇ ವೇಳೆ ರಮೇಶ್ ಕುಮಾರ್ ಬಣದ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದು, ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬೆಂಬಲಿಗರ ನಡುವೆ ದೊಡ್ಡ ಗಲಾಟೆಯೇ ನಡೆದಿದೆ.
ಈ ವೇಳೆ ಮಾತನಾಡಿದ ಮುನಿಯಪ್ಪ, ಇಲ್ಲಿ ಇಬ್ಬರು, ಮೂವರಿಂದ ಗೊಂದಲ ಸೃಷ್ಟಿಯಾಗಿದೆ. ಈ ಗೊಂದಲ ಸರಿ ಮಾಡಿ ಬನ್ನಿ ಎಂದು ನಾನು ಸಿದ್ದರಾಮಯ್ಯನವರಿಗೆ ಹೇಳಿದ್ದೇನೆ. ಹೈಕಮಾಂಡ್ ಒಪ್ಪಿಗೆ ಸೂಚಿಸಿದರೆ ನಾವು ಸಿದ್ದರಾಮಯ್ಯ ಪರ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯ ಬರಲ್ಲ ಎನ್ನುವುದಾದರೆ ಸ್ಥಳೀಯರಿಗೆ ಅವಕಾಶ ಕೊಡಿ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗುತ್ತೇವೆ ಎಂದರು.