ಬೆಂಗಳೂರು: ರಾಜ್ಯಸಭೆ ಚುನಾವಣೆ ರೋಚಕ ಘಟ್ಟ ತಲುಪಿದ್ದು, ಜೆಡಿಎಸ್ ಬೆಂಬಲಿಸಲು ಕಾಂಗ್ರೆಸ್ ಒಪ್ಪದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ, ಸೋನಿಯಾ ಗಾಂಧಿಯವರು ಬೆಂಬಲ ಕೇಳಿದ್ದು ನಿಜ. ಮಾತುಕತೆಯಾಗಿದ್ದು ನಿಜ. ಆದರೆ ಕಾಂಗ್ರೆಸ್ ರಾಜ್ಯ ನಾಯಕರು ಚರ್ಗೆಗೆ ಬಂದ್ರಾ? ಆತ್ಮ ಸಾಕ್ಷಿ ಮಾತನಾಡಲು ನಾವೇನು ನಿಮಗೆ ಅಡಿಯಾಳುಗಳಾ? ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ 2ನೇ ಅಭ್ಯರ್ಥಿ ಹಾಕುವ ಮೊದಲೇ ನಾವು ಕಾಂಗ್ರೆಸ್ ಗೆ ಬೆಂಬಲ ಕೇಳಿದ್ದೆವು. ರಾಜ್ಯ ನಾಯಕರು ಯಾವುದೇ ಚರ್ಚೆಗೆ ಬರದೇ ನಾಟಕವಾಡುತ್ತಿದ್ದಾರೆ. ಈಗ ನಾವು ವೋಟ್ ಹಾಕಬೇಕಂತೆ ಆ ನಂತರ ಚುನಾವಣೆಯ ಬಳಿಕ ಮಾತಕತೆ ನಡೆಸೋಣ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳುತ್ತಿದ್ದಾರೆ. ನಮಗೆ ಅಂತಹ ಸ್ಥಿತಿ ಬಂದಿಲ್ಲ. ಆತ್ಮಸಾಕ್ಷಿ ಹೇಳಿಕೆ ನಿಡಿದವರು ಈಗ ಇಂತಹ ಮಾತುಗಳನ್ನೇಕೆ ಆಡುತ್ತಿದ್ದಾರೆ. ಪ್ರಾಮಾಣಿಕತೆ ಇದ್ದರೆ ಸಾರ್ವಜನಿಕವಾಗಿ ಚರ್ಚೆಗೆ ಬರಲಿ ನಾನು ಸಿದ್ಧ. ಅದನ್ನು ಬಿಟ್ಟು ಇಂತಹ ಹೇಳಿಕೆ ನೀಡುತ್ತಿರುವುದು ಸರಿಯಲ್ಲ.
ನಮ್ಮ ಪಕ್ಷದ ಶಾಸಕರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು. ಆತ್ಮಸಾಕ್ಷಿ ಅಂದರೆ ಇದೆ ಏನು? ಇದು ಆತ್ಮಸಾಕ್ಷಿ ಪ್ರಕಾರ ಸಂಪರ್ಕವೇ ವ್ಯಾಪಾರವೇ? ನಮ್ಮ ಪಕ್ಷದ ಶಾಸಕರನ್ನು ಸೋಲಿಸಲು ಕಳೆದ ಚುನಾವಣೆಯಲ್ಲಿ ಬಿಜೆಪಿ ಬಿ ಟೀಂ ಎಂದು ಕರೆದರು ಈಗ ಯಾವ ನೈತಿಕತೆ ಮೇಲೆ ನಮ್ಮ ಶಾಸಕರಿಗೆ ಪತ್ರ ಬರೆದರು? ಈಗ ನಿಮಗೆ ಜೆಡಿಎಸ್ ಬಗ್ಗೆ ಜ್ಞಾನೋದಯವಾಯಿತೆ? ಎಂದು ಕೆಂಡಾಮಂಡಲಾಗಿದ್ದಾರೆ.