ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣವರ್ ಸಹೋದರ ರಾಘವೇಂದ್ರ ಚೆನ್ನಣ್ಣವರ್ ವಿರುದ್ಧ ಪತ್ನಿ ದೂರು ದಾಖಲಿಸಿದ್ದು, ಬೇರೆ ಯುವತಿಯೊಂದಿಗೆ ತನ್ನ ಪತಿಗೆ ಅಕ್ರಮ ಸಂಬಂಧವಿರುವುದಾಗಿ ಆರೋಪಿಸಿದ್ದಾರೆ.
ರಾಘವೇಂದ್ರ ಚೆನ್ನಣ್ಣವರ್ 7 ವರ್ಷಗಳ ಹಿಂದೆ ರೋಜಾ ಎಂಬುವವರನ್ನು ವಿವಾಹವಾಗಿದ್ದರು. ರವಿ ಡಿ ಚೆನ್ನಣ್ಣವರ್ ಹಾಗೂ ಕುಟುಂಬದವರೇ ನೋಡಿ ಮಾಡಿದ ಮದುವೆಯಾಗಿತ್ತು. ಆದರೆ ಮದುವೆಯಾಗಿ 1 ವರ್ಷದಲ್ಲಿ ತನ್ನ ಪತಿಗೆ ರುಕ್ಮಿಣಿ ಎಂಬುವವಳ ಜತೆ ಅಕ್ರಮ ಸಂಬಂಧವಿರುವುದು ಗೊತ್ತಾಗಿದೆ. ಈ ವಿಚಾರ ಸ್ವತಃ ಮನೆಯವರೂ ಹೇಳಿದ್ದು, ತನಗೆ ಕುಟುಂಬದವರೆಲ್ಲರೂ ಸೇರಿ ಮೋಸ ಮಾಡಿದ್ದಾರೆ ಎಂದು ರೋಜಾ ಕಣ್ಣೀರಿಟ್ಟಿದ್ದಾರೆ.
ವಿಷಯ ಗೊತ್ತಾಗುತ್ತಿದ್ದಂತೆ ತಾನು ರವಿ ಡಿ ಚೆನ್ನಣ್ಣವರ್ ಬಳಿ ನ್ಯಾಯ ಕೊಡಿಸುವಂತೆ ಕೇಳಿದ್ದು ಅದಕ್ಕೆ ತನ್ನ ಸಹೋದರನಿಗೆ ಸ್ವಲ್ಪ ಸಮಯಾವಕಾಶ ಕೊಡು ಆತ ಸರಿ ಹೋಗುತ್ತಾನೆ. ಸಧ್ಯ ನೀನು ಉನ್ನತ ವ್ಯಾಸಂಗ ಮುಗಿಸುವಂತೆ ಹೇಳಿ ನಂಬಿಸಿದ್ದಾರೆ. ಅವರ ಮಾತಿನಂತೆ ತಾನು ಉನ್ನತ ವ್ಯಾಸಂಗ ಮುಗಿಸಿದ್ದೇನೆ ಆದರೂ ತನ್ನ ಪತಿ ಅಕ್ರಮ ಸಂಬಂಧ ಮುಂದುವರೆಸಿದ್ದು, ತನಗೆ ಹಿಂಸಿಸುತ್ತಿದ್ದಾರೆ. ಅಲ್ಲದೇ ರುಕ್ಮಿಣಿ ಎಂಬುವವಳ ಜತೆ ವಿವಾಹವಾಗಿದೆ ಎನ್ನುತ್ತಿದ್ದಾರೆ ಎಂದು ರೋಜಾ, ಪತಿ ರಾಘವೇಂದ್ರ ಚೆನ್ನಣ್ಣವರ್ ವಿರುದ್ಧ ದೂರು ನೀಡಿದ್ದಾರೆ.
ಅಲ್ಲದೇ ಇರುವುದಾದರೆ ಇಬ್ಬರು ಹೆಂಡತಿಯರು ಹೊಂದಿಕೊಂಡು ಇರುವಂತೆ ಹೇಳುತ್ತಿದ್ದಾರೆ. ಇದನ್ನು ಯಾವ ಹೆಂಡತಿ ಒಪ್ಪಲು ಸಾಧ್ಯ? ನನಗೆ ನ್ಯಾಯ ಕೊಡಿಸಿ ಎಂದು ರಾಘವೇಂದ್ರ ಚೆನ್ನಣ್ಣವರ್ ಪತ್ನಿ ರೋಜಾ ಚಂದ್ರ ಲೇಔಟ್ ಠಾಣೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.