ಬೆಂಗಳೂರು : ಬೆಂಗಳೂರಲ್ಲಿ ಕಾಲರಾ ಪ್ರಕರಣ ಹೆಚ್ಚಳವಾಗಿದ್ದು, ಬಿಬಿಎಂಪಿ ಮಾರ್ಗಸೂಚಿ ಪ್ರಕಟಿಸಿದೆ. ಕರಳು ಬೇನೆ/ಕಾಲರಾ ಖಾಯಿಲೆ ಒಂದು ಸಾಂಕ್ರಾಮಿಕ ರೋಗವಾಗಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದ್ದಲ್ಲಿ ಈ ಖಾಯಿಲೆಯನ್ನು ತಡೆಗಟ್ಟಬಹುದು. ವಾಂತಿ, ಭೇದಿ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಎಂದು ಬಿಬಿಎಂಪಿ ಸೂಚನೆ ನೀಡಿದೆ.
ಮಾರ್ಗಸೂಚಿಯಲ್ಲೇನಿದೆ
* ಕುಡಿಯಲು ಬಿಸಿ ನೀರು ವ್ಯವಸ್ಥೆ ಮಾಡುವ ಜತೆಗೆ ಹೋಟೆಲ್ ಆವರಣದ ಸ್ವಚ್ಛತೆಯನ್ನು ನಿರ್ವಹಿಸಲು ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು.
* ಹಿರಿಯ ಆರೋಗ್ಯ ಪರೀವೀಕ್ಷಕರು ಸ್ಥಳೀಯ ಹೋಟೆಲ್ ಮತ್ತು ಅಂಗಡಿಗಳನ್ನು ತಪಾಸಣೆ ನಡೆಸಬೇಕು.
* ಆಹಾರ ಮತ್ತು ನೀರಿನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು.
* ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಆರೋಗ್ಯ ಪರಿವೀಕ್ಷಕರು ಕ್ರಮವಹಿಸಬೇಕು.
* ರಸ್ತೆ ಬದಿಗಳಲ್ಲಿ ಕತ್ತರಿಸಿದ ಹಣ್ಣು ಮತ್ತು ತೆರೆದಿಟ್ಟ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ಕ್ರಮವಹಿಸಬೇಕು.
* ತಮ್ಮ ವ್ಯಾಪ್ತಿಗೆ ಒಳಪಡುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಂದ ಸಾಂಕ್ರಾಮಿಕ ರೋಗಗಳ ವರದಿಯನ್ನು ಪ್ರತಿನಿತ್ಯ ಪಡೆಯಬೇಕು.
* ಕುಡಿಯುವ ನೀರಿನ ಮೂಲಗಳಿಂದ ಕಾಲಕಾಲಕ್ಕೆ ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಬೇಕು.
* ಕುಡಿಯಲು ಯೋಗ್ಯವಿರುವುದರ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಹಿರಿಯ ಆರೋಗ್ಯ ಪರಿವೀಕ್ಷಕರ ಮುಖಾಂತರ ಆರೋಗ್ಯ ವೈದ್ಯಾಧಿಕಾರಿಗಳು ಕ್ರಮವಹಿಸಬೇಕು.
ಮಾಡಬೇಕಾಗಿರುವುದು
* ಕುದಿಸಿ, ಆರಿಸಿದ ನೀರನ್ನು ಕುಡಿಯುವುದು
* ಸಾರ್ವಜನಿಕ ನೀರಿನ ಕೊಳಾಯಿ ಮತ್ತು ಸ್ಥಳವನ್ನು ಸ್ವಚ್ಛವಾಗಿಡುವುದು
* ತಾಜಾ ಆಹಾರವನ್ನು ಸೇವಿಸಬೇಕು
* ತಾಜಾ ಹಣ್ಣು, ತರಕಾರಿ ಮತ್ತು ಆಹಾರ ಪದಾರ್ಥಗಳನ್ನೇ ಉಪಯೋಗಿಸಬೇಕು
* ಊಟ ಮಾಡುವ ಮುನ್ನ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಸ್ವಚ್ಛ ಗೊಳಿಸಬೇಕು
* ಶೌಚಾಲಯವನ್ನು ಉಪಯೋಗಿಸುವ ಮುಂಚೆ ಮತ್ತು ನಂತರ ಕೈಗಳನ್ನು ಸಾಬೂನಿನಿಂದ ಸ್ವಚ್ಛ ಗೊಳಿಸಬೇಕು
* ಸಿದ್ಧಪಡಿಸಿದ ಆಹಾರ ಪದಾರ್ಥಗಳ ಮೇಲೆ S ಕ್ರಿಮಿಕೀಟಗಳು ಕುಳಿತುಕೊಳ್ಳದಂತೆ ಸದಾ ಮುಚ್ಚಳದಿಂದ ಮುಚ್ಚಿಡುವುದು.
* ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು
* 15 ದಿನಕೊಮ್ಮೆ ಕುಡಿಯುವ ನೀರಿನ ತೊಟ್ಟಿಯನ್ನು ಕ್ಲೀಚಿಂಗ್ ಪೌಡರ್ನಿಂದ ಸ್ವಚ್ಛಗೊಳಿಸುವುದು
ಏನು ಮಾಡಬಾರದು
* ಸೋರಿಕೆ ಇರುವ ಕೊಳಾಯಿ ನೀರನ್ನು ಕುಡಿಯಬಾರದು.
* ಪಾದಚಾರಿ ರಸ್ತೆಗಳಲ್ಲಿ, ರಸ್ತೆ ಬದಿಗಳಲ್ಲಿ ಮಾರಾಟ ಮಾಡುವ ತಿನಿಸುಗಳು ಹಾಗೂ ತಳ್ಳುಗಾಡಿಗಳಲ್ಲಿ ಮಾರುವ, ಕತ್ತರಿಸಿದ ಹಣ್ಣು ಪದಾರ್ಥಗಳನ್ನು ತಿನ್ನಬಾರದು.
* ಧೂಳು, ನೊಣ, ಜಿರಲೆಗಳು ಇತರ ಕೀಟಗಳು ಮುತ್ತುವಂತೆ ತೆರೆದಿಟ್ಟಿರುವ ಆಹಾರ ಪದಾರ್ಥಗಳನ್ನು ಸೇವಿಸಬಾರದು.
* ಕಸ ಮತ್ತು ಇತರೆ ತ್ಯಾಜ್ಯ ವಸ್ತುಗಳನ್ನು ರಸ್ತೆಬದಿ, ಪಾದಚಾರಿ ರಸ್ತೆ, ಮೋರಿಯಲ್ಲಿ ಹಾಕಬಾರದು. ಹಾಕಿದಲ್ಲಿ ಕ್ರೀಮಿಕೀಟಗಳು ಆಕರ್ಷಿಸಿ ಕರುಳು ಬೇನೆ/ಕಾಲರ ಬರುವ ಸಂಭವವಿರುತ್ತದೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕಾಲರಾ ಪ್ರಕರಣಗಳು ಹೆಚ್ಚುತ್ತಿವೆ. ಈವರೆಗೆ 14 ಪ್ರಕರಣಗಳು ದಾಖಲಾಗಿದ್ದು, ವಾಂತಿ-ಭೇದಿ, ನಿರ್ಜಲೀಕರಣ, ಅತಿಸಾರದಿಂದಾಗಿ ಜನರು ಬಳಲುತ್ತಿದ್ದಾರೆ.ಬಿಬಿಎಂಪಿ ವ್ಯಾಪ್ತಿಯಲ್ಲಿ 8 ಕಾಲರಾ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲಿ 5 ಪ್ರಕರಣ ಹಾಗೂ ರಾಮನಗರದಲ್ಲಿ 1 ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಒಂದೆಡೆ ತಾಪಮಾನ ಏರಿಕೆ, ನೀರಿನ ಸಮಸ್ಯೆ ನಡುವೆ ಕಾಲರಾ ಸೋಂಕು ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಿಸುತ್ತಿದೆ.