ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಾರದಲ್ಲಿ 2 ಗಂಟೆ ‘ನಾವು ಮನುಜರು’ ತರಗತಿ ನಡೆಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ನಾವು ಮನುಜರು ಎಂಬ ವಿಶೇಷ ಯೋಜನೆಯನ್ನು ಜಾರಿಗೆ ತರಲಾಗಿದೆ. ಅದರಂತೆ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಾರದಲ್ಲಿ 2 ಗಂಟೆಗಳ ವಿಚಾರ ವಿಮರ್ಶೆ ಮತ್ತು ಸಂವಾದ ಚಟುವಟಿಕೆಗಳನ್ನು ಒಳಗೊಂಡ ತರಗತಿಗಳನ್ನು ನಡೆಸಬೇಕು.
ಶಾಲಾ ವೇಳಾಪಟ್ಟಿಯಲ್ಲಿ ಮೌಲ್ಯಶಿಕ್ಷಣದ ಒಂದು ಅವಧಿ ಮತ್ತು ಉಳಿದ 2 ಅವಧಿಗಳನ್ನು ಹೊಂದಾಣಿಕೆ ಮಾಡಿಕೊಂಡು ಕಡ್ಡಾಯವಾಗಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಉದ್ದೇಶವೇನು?
• ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸಾಮರಸ್ಯ, ವೈಜ್ಞಾನಿಕ ಮನೋಭಾವ ಮತ್ತು ಸಹಬಾಳ್ವೆ ಬೆಳೆಸುವುದು
• ಚಟುವಟಿಕೆ ಆಧಾರಿತ ಕಲಿಕೆಗೆ ಪ್ರೋತ್ಸಾಹಿಸುವುದು
• ಸ್ಥಳೀಯ ಮೌಡ್ಯಗಳನ್ನು ನಿವಾರಣೆ ಮಾಡುವ ಬಗ್ಗೆ ಚರ್ಚಿಸುವುದು
• ಮನೆಮದ್ದು, ಸ್ಥಳೀಯ ಔಷಧಗಳ ಬಗ್ಗೆ ಪರಿಚಯಿಸುವುದು
• ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವುದು