ಮುಂಬೈ: ಬಿಜೆಪಿ ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ಆರ್.ಎಸ್.ಎಸ್. ನಿಷೇಧಿಸಲು ಚಿಂತನೆ ನಡೆಸಿದೆ ಎಂದು ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಶಿವಸೇನೆಯನ್ನು ಬಳಸಿ ಬಿಸಾಡಲು ಯತ್ನಿಸಿದ ರೀತಿಯ ಆಟವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ದಿನಗಳಲ್ಲಿ ಆರ್‌ಎಸ್‌ಎಸ್ ಜೊತೆಗೂ ಆಡಲಿದ್ದಾರೆ. ಇದರ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಿಂದೆಯೇ ಹೇಳಿದ್ದರು ಎಂದು ಉದ್ದವ್ ಠಾಕ್ರೆ ತಿಳಿಸಿದ್ದಾರೆ.
ಆರ್.ಎಸ್.ಎಸ್. ಅಗತ್ಯ ಇಲ್ಲಿಯವರೆಗೂ ಇತ್ತು. ಆದರೆ, ಈಗ ನಾವು ಸಮರ್ಥರಾಗಿದ್ದೇವೆ. ನಮಗೆ ಆರೆಸ್ಸೆಸ್ ಅಗತ್ಯವಿಲ್ಲ ಎಂದು ಜೆ.ಪಿ. ನಡ್ಡಾ ಹೇಳಿದ್ದರು. ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಅದು ಆರ್.ಎಸ್.ಎಸ್. ಕಾರ್ಯಕರ್ತರಿಗೆ ದೊಡ್ಡ ಅಪಾಯ. ಏಕೆಂದರೆ ಬಿಜೆಪಿಯವರು ಆರ್.ಎಸ್.ಎಸ್. ನಿಷೇಧಿಸುತ್ತಾರೆ ಎಂದು ಉದ್ದವ್ ಠಾಕ್ರೆ ಹೇಳಿದ್ದಾರೆ.
ಈ ಹಿಂದೆ ಕೇಂದ್ರ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಬಾಯ್ ಪಟೇಲ್ ಅವರು ಆರ್.ಎಸ್.ಎಸ್. ನಿಷೇಧಿಸಿದ್ದರು ಎಂದು ಉದ್ದವ್ ಠಾಕ್ರೆ ಸ್ಮರಿಸಿದ್ದಾರೆ.