ಬೆಂಗಳೂರು: ನಟ ಸುದೀಪ್ ಮತ್ತು ನಿರ್ಮಾಪಕ ಎಂ.ಎನ್. ಕುಮಾರ್ ಅವರ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಇಂದು ನಿರ್ಮಾಪಕ ಕುಮಾರ್ ಅವರು ರಾಜಕುಮಾರ್ ಪ್ರತಿಮೆ ಎದುರು ಧರಣಿ ನಡೆಸಿದ್ದಾರೆ.
ಹಣಕಾಸು ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವಿನ ಸಂಘರ್ಷ ಮತ್ತೊಂದು ಹಂತ ತಲುಪಿದ್ದು, ಇಂದು ಕರ್ನಾಟಕ ಫಿಲ್ಮ್ ಚೇಂಬರ್ ಬಳಿ ಇರುವ ರಾಜಕುಮಾರ್ ಪ್ರತಿಮೆ ಎದುರು ಎಂ.ಎನ್. ಕುಮಾರ್ ಧರಣಿ ನಡೆಸಿದ್ದಾರೆ. ಅವರಿಗೆ ನಿರ್ಮಾಪಕರ ಸಂಘದ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಮೊದಲಾದವರು ಸಾಥ್ ನೀಡಿದರು.
ಧರಣಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರ್ ‘ ನಾನು ಸುದೀಪ್ ಬಗ್ಗೆ ಯಾವತ್ತೂ ಕೆಟ್ಟದಾಗಿ ಮಾತನಾಡಿಲ್ಲ, ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಷ್ಟೇ ಹೇಳಿದೆ. ಅವರ ಜೊತೆ ರಾಜಿ ಸಂಧಾನಕ್ಕೆ ಕೂಡ ಸಿದ್ದನಿದ್ದೇನೆ ಎಂದರು. ನನ್ನದು ಏನಿದೆ ಅದನ್ಜು ಕ್ಲಿಯರ್ ಮಾಡಿದರೆ ಸಾಕು, ಅವರು ಸಭೆಗೆ ಬರಲಿ ನಾನು ಎಲ್ಲಾ ದಾಖಲೆಗಳನ್ನು ಕೊಡುತ್ತೇನೆ. ರಾಜಿ ಸಂಧಾನಕ್ಕೆ ಅವರು ಕರೆಯಬೇಕಿತ್ತು, ಆದರೆ ನಾವೇ ಕರೆಯತ್ತಿದ್ದೇವೆ ಎಂದರು.
ತಮ್ಮಿಂದ ಸುದೀಪ್ ಹಣ ಪಡೆದುಕೊಂಡು ಸಿನಿಮಾ ಮಾಡಿಕೊಡುತ್ತಿಲ್ಲ ಎಂದು ಕುಮಾರ್ ಆರೋಪ ಮಾಡಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಸುದೀಪ್ ಲೀಗಲ್ ನೋಟಿಸ್ ನೀಡಿದ್ದಲ್ಲದೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆ ನಿರ್ಮಾಪಕ ಕುಮಾರ್ ಧರಣಿ ನಡೆಸಿದ್ದಾರೆ.
ನಿರ್ಮಾಪಕ ಕುಮಾರ್ ಯೂ ಟರ್ನ್
ನಾನು ನೀಡಿರುವುದು ದೂರು ಅಲ್ಲ ಅದು ಮನವಿಪತ್ರವಷ್ಟೇ, ಯಾವುದೇ ದೂರು ನೀಡಿಲ್ಲ, ಸಮಸ್ಯೆ ಬಗೆಹರಿಸಿಕೊಳ್ಳಲು ಸುದೀಪ್ ಅವರನ್ನು ಹುಡುಕಿಕೊಂಡು ಹೋದರೆ ಅವರು ಇಲ್ಲವೆಂದು ಹೇಳುತ್ತಿದ್ದರು. ಸುದೀಪ್ರ ಮ್ಯಾನೇಜರ್ ನನಗೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ, ಹಾಗಾಗಿ ನಾನು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿಪತ್ರ ನೀಡಿದೆ” ಎಂದು ಕುಮಾರ್ ಇತ್ತೀಚೆಗೆ ಹೇಳಿದ್ದರು. ಕೋರ್ಟ್ ನೋಟಿಸ್ ಬಂದರೆ ಫಿಲ್ಮ್ ಚೇಂಬರ್ಗೆ ತಂದು ಕೊಡುತ್ತೇನೆ, ವಾಣಿಜ್ಯ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ಹೇಳಿದಂತೆ ನಡೆಯುವೆ” ಎಂದಿದ್ದರು.