ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಅವರ ರಾಜೀನಾಮೆ ನಿರ್ಧಾರ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಾಲಿಗೆ ವಿಶೇಷ ವ್ಯಕ್ತಿಯಾಗಿದ್ದ ಮಿಮಿ ಚಕ್ರವರ್ತಿ ಇಷ್ಟು ಬೇಗ ರಾಜಕೀಯದಲ್ಲಿ ಭ್ರಮನಿರಸನಗೊಂಡಿದ್ಯಾಕೆ ಅನ್ನೋ ಪ್ರಶ್ನೆಯೀಗ ಹುಟ್ಟಿಕೊಂಡಿದೆ. ನಟಿ ಹಾಗೂ ಸಂಸದೆ ಮಿಮಿ ಚಕ್ರವರ್ತಿ ತಮ್ಮ ರಾಜೀನಾಮೆಗೆ ಕಾರಣವನ್ನೂ ನೀಡಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರದಲ್ಲಿರುವಾಗಲೇ ಸಂಸದೆಯ ರಾಜೀನಾಮೆ ಟಿಎಂಸಿಗೆ ಹಿನ್ನಡೆ ಉಂಟುಮಾಡಿದೆ.
ಜಾದವ್‌ಪುರದ ಲೋಕಸಭಾ ಸಂಸದೆ ಮಿಮಿ ಚಕ್ರವರ್ತಿ ಈ ನಿರ್ಧಾರಕ್ಕೆ ಬಂದಿದ್ದು ಸ್ಥಳೀಯ ನಾಯಕತ್ವದ ಮೇಲಿನ ಅಸಮಾಧಾನದಿಂದ. ಮಿಮಿ ಚಕ್ರವರ್ತಿ, 2019ರ ಲೋಕಸಭಾ ಚುನಾವಣೆಯಲ್ಲಿ ಜಾದವ್‌ಪುರ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಗೆಲುವು ಸಾಧಿಸಿದ್ದರು. ಅವರು ರಾಜಕೀಯದಿಂದ ದೂರವಾಗುತ್ತಾರಾ ಅಥವಾ ಟಿಎಂಸಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗ್ತಾರಾ ಅನ್ನೋ ಪ್ರಶ್ನೆಯೂ ಈಗ ಎದ್ದಿದೆ.
ಮಿಮಿ ಚಕ್ರವರ್ತಿ ಮೂಲತಃ ಪಶ್ಚಿಮ ಬಂಗಾಳದ ಜಲ್ಪೈಗುರಿಯವರು. ಬಾಲ್ಯವನ್ನು ಅರುಣಾಚಲ ಪ್ರದೇಶದಲ್ಲಿ ಕಳೆದರು. 2011ರಲ್ಲಿ ಕೋಲ್ಕತ್ತಾದಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಮಿಮಿ ಚಕ್ರವರ್ತಿ ಮಾಡೆಲಿಂಗ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ರು. ಮಿಸ್ ಇಂಡಿಯಾ ಸ್ಪರ್ಧೆಯಲ್ಲೂ ಭಾಗವಹಿಸಿದ್ದಾರೆ. ಟಿವಿ ಧಾರಾವಾಹಿ ‘ಚಾಂಪಿಯನ್’ ಮೂಲಕ ನಟನಾ ವೃತ್ತಿ ಜೀವನವನ್ನು ಪ್ರಾರಂಭಿಸಿದರು.
2012 ರಲ್ಲಿ ಬಿಡುಗಡೆಯಾದ ‘ಬಪ್ಪಿ ಬರಿ ಜಾ’ ಅವರ ಚೊಚ್ಚಲ ಚಿತ್ರ. ನಂತರ ‘ಖಾದ್’, ‘ಜಮಾಯಿ 420’, ‘ಕಠ್ಮಂಡು’, ‘ಪೋಸ್ಟೋ’, ‘ವಿಲನ್’, ‘ಉಮಾ’, ‘ಮಿನಿ’ ಟು ‘ಬಾಜಿ’ ಚಿತ್ರಗಳಲ್ಲಿ ನಟಿಸಿದ್ದಾರೆ. 2023 ರಲ್ಲಿ ಮಿಮಿ ಅವರಿಗೆ ಹಿಂದಿ ಚಿತ್ರರಂಗದಲ್ಲೂ ಚಾನ್ಸ್ ಸಿಕ್ಕಿತು. ಮಿಮಿ ಚಕ್ರವರ್ತಿ ಅವರಿಗೆ ಮದುವೆಯಾಗಿಲ್ಲ. ಮೊದಲ ಪ್ರಯತ್ನದಲ್ಲೇ ಚುನಾವಣೆ ಗೆದ್ದು ಸಂಸದೆಯಾಗಿದ್ದ ಮಿಮಿ ಇಷ್ಟು ಬೇಗ ರಾಜಕೀಯದಿಂದ ದೂರವಾಗಿದ್ದಾರೆ.