ಬೆಂಗಳೂರು : 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳ ಫಲಿತಾಂಶ ವೃದ್ಧಿಗಾಗಿ ಅನುಸರಿಸಬೇಕಾದ ಕ್ರಮಗಳ ಕುರಿತು ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳ ಶೈಕ್ಷಣಿಕ ಫಲಿತಾಂಶ ವೃದ್ಧಿಗಾಗಿ ಉಲ್ಲೇಖಿತ ಸಭೆಗಳಲ್ಲಿ ಈಗಾಗಲೇ ಮಾಹಿತಿ / ಸೂಚನೆಗಳನ್ನು ನೀಡಲಾಗಿದ್ದು, ಜಿಲ್ಲೆಯಲ್ಲಿನ ವಿವಿಧ ಹಂತದ ಅಧಿಕಾರಿಗಳು ಈ ಮುಂದಿನಂತೆ ಕಾರ್ಯನಿರ್ವಹಿಸುವುದು.
1. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಪಠ್ಯವಸ್ತುವನ್ನು ಶೈಕ್ಷಣಿಕ ಮಾರ್ಗದರ್ಶಿಯಂತೆ ಡಿಸೆಂಬರ್ 2024 ರ ಅಂತ್ಯದೊಳಗೆ ಪೂರ್ಣಗೊಳಿಸಲು ಕ್ರಮವಹಿಸುವುದು.
2. ಪ್ರತಿದಿನ ಶಾಲೆ / ಕಾಲೇಜು ಅವಧಿಯ ಮೊದಲು ಅಥವಾ ನಂತರ ಒಂದು ವಿಷಯಕ್ಕೆ ವಿಶೇಷ ತರಗತಿಯನ್ನು ಆಯೋಜಿಸುವುದು.
3. ಘಟಕ ಪರೀಕ್ಷೆಗಳನ್ನು ನಡೆಸಿ ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳ ಪ್ರಗತಿಯನ್ನು ವಿಶ್ಲೇಷಿಸುವುದು ಹಾಗೂ ವೆಬ್ಕಾಸ್ಟಿಂಗ್ ವ್ಯವಸ್ಥೆ ಲಭ್ಯವಿರುವ ಶಾಲೆ/ಕಾಲೇಜುಗಳಲ್ಲಿ ಎಲ್ಲಾ ಘಟಕ ಪರೀಕ್ಷೆಗಳನ್ನು ವೆಬ್ ಕಾಸ್ಟಿಂಗ್ ವೀಕ್ಷಣೆಯಲ್ಲಿ ನಡೆಸುವುದು.
4. ನಿಧಾನಗತಿ ಕಲಿಕಾ ಲಕ್ಷಣಗಳಿರುವ ವಿದ್ಯಾರ್ಥಿಗಳ ಕಲಿಕೆಯನ್ನು ಬಲವರ್ಧನೆಗೊಳಿಸಲು ಅವರನ್ನು ಕಲಿಕಾ ಪ್ರಗತಿ ಸಾಧಿಸಿರುವ ವಿದ್ಯಾರ್ಥಿಗಳೊಂದಿಗೆ ដ (Buddy Pairing).
5. ಪ್ರತಿ ಘಟಕವಾರು ಕಲಿಕಾ ಬಲವರ್ಧನೆ ಅಭ್ಯಾಸ ಪುಸ್ತಕಗಳು / ಪ್ರಶ್ನೆಕೋಠಿ (Question Bank) ಗಳನ್ನು ಅಭಿವೃದ್ಧಿಪಡಿಸುವುದು.
6. ವಿದ್ಯಾರ್ಥಿಗಳ ಬರವಣಿಗೆಯ ಗುಣಮಟ್ಟವನ್ನು ಹೆಚ್ಚಿಸಲು ಪ್ರತಿದಿನ 2 ಪುಟಗಳನ್ನು ಬರೆಸುವುದು ಮತ್ತು ಗಟ್ಟಿಯಾಗಿ ಓದಿಸುವ ಅಭ್ಯಾಸವನ್ನು ಮಾಡಿಸುವುದು.
7. ಪ್ರತಿ 15 ದಿನಗಳಿಗೊಮ್ಮೆ ಪೋಷಕರ ಸಭೆಯನ್ನು ನಡೆಸಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ವರದಿಯನ್ನು ಪೋಷಕರಿಗೆ ತಿಳಿಸುವುದು.
8. ಯಾವುದೇ ವಿದ್ಯಾರ್ಥಿಯು 3 ರಿಂದ 4 ದಿನಗಳು ನಿರಂತರ ಗೈರುಹಾಜರಾದರೆ ಎಸ್.ಡಿ.ಎಂ.ಸಿ ಹಾಗೂ ಇನ್ನಿತರೆ ಭಾಗೀದಾರರೊಂದಿಗೆ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಯನ್ನು ಶಾಲೆಗೆ ಕರೆತರಲು ಮನವೊಲಿಸುವುದು ಮತ್ತು ನಿರಂತರ ಗೈರುಹಾಜರಾಗುವ ವಿದ್ಯಾರ್ಥಿಗಳ ಕುರಿತು Case Study ನಡೆಸಿ ಸೂಕ್ತ ಕಾರಣಗಳನ್ನು ಹುಡುಕಿ ಗೈರುಹಾಜರಿ ಕಡಿಮೆ ಮಾಡಲು ಕ್ರಮವಹಿಸುವುದು.
9. ಪ್ರತಿದಿನ ಮುಂಜಾನೆ ಅಥವಾ ಸಂಜೆ ವೇಳೆಯಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಅಭ್ಯಾಸ ಮಾಡುತ್ತಿರುವುದನ್ನು ಪರಿಶೀಲಿಸಲು Wake up call ಮಾಡುವುದು.
10.ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಫಲಿತಾಂಶ ಉತ್ತಮಪಡಿಸಲು ಪುನಶ್ವೇತನ ತರಬೇತಿಯನ್ನು ಆಯೋಜಿಸುವುದು.
11. ಫಲಿತಾಂಶದ ಅಭಿವೃದ್ಧಿಗಾಗಿ ಕೈಗೊಳ್ಳುವ ಎಲ್ಲಾ ಕಾರ್ಯಚಟುವಟಿಕೆಗಳ ಮೇಲುಸ್ತುವಾರಿಯನ್ನು ನಡೆಸುವುದು ಜಿಲ್ಲಾ ಹಾಗೂ ತಾಲ್ಲೂಕು ಹಂತದ ಎಲ್ಲಾ ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಉಪನಿರ್ದೇಶಕರು ಆಡಳಿತ, ಅಭಿವೃದ್ಧಿ ಮತ್ತು ಪದವಿ ಪೂರ್ವ ಶಿಕ್ಷಣರವರು ಈ ಕಾರ್ಯವನ್ನು ನಿರ್ವಹಿಸುವುದು.
12. Average, Below Average & Above Average ರಚಿಸಿ ಪ್ರತೀ ಶಿಕ್ಷಕರಿಗೆ ಸಮನಾಗಿ ವಿದ್ಯಾರ್ಥಿಗಳನ್ನು ದತ್ತು ನೀಡುವುದು.
13.ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗೆ ಪ್ರತಿ ವಿಷಯದಲ್ಲಿ 5 ಮಾದರಿ ಪ್ರಶ್ನೆಪತ್ರಿಕೆಗಳನ್ನು ರಚಿಸಿ ಮಂಡಲಿಯ ವೆಬ್ಸೈಟ್ನಲ್ಲಿ Upload ಮಾಡಲಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಬಳಸಿಕೊಳ್ಳುವುದು.
14.ಪಿ.ಯು.ಸಿ ಫಲಿತಾಂಶ ಸುಧಾರಣೆಗಾಗಿ ಕೈಗೊಂಡ ಅಂಶಗಳನ್ನು ಪರಿಶೀಲಿಸಿ ಮೇಲುಸ್ತುವಾರಿ ನಡೆಸಲು ಪ್ರಾಂಶುಪಾಲರು ಮತ್ತು ಇಬ್ಬರು ಉಪನ್ಯಾಸಕರನ್ನೊಳಗೊಂಡ 01 ತಂಡವನ್ನು (ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳ ಉಪನ್ಯಾಸಕರು) ಜಿಲ್ಲಾ ಉಪನಿರ್ದೇಶಕರು ಪದವಿ ಪೂರ್ವ ರವರು ರಚಿಸುವುದು.
15.10ನೇ ತರಗತಿಯ ಪ್ರತಿ ಘಟಕವಾರು ಪ್ರಶ್ನೆಕೋಠಿಗಳನ್ನು ವಿವಿಧ ಡಯಟ್ ಮುಖಾಂತರ ಸಿದ್ದಪಡಿಸಿ, ಮಂಡಲಿಯ ವೆಬ್ಸೈಟ್ನಲ್ಲಿ ಲಭ್ಯ ಮಾಡಲಾಗುತ್ತಿದ್ದು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಲು ಕ್ರಮವಹಿಸುವುದು.
16.ಎಸ್.ಎಸ್.ಎಲ್.ಸಿ ಮಧ್ಯವಾರ್ಷಿಕ ಪರೀಕ್ಷೆ (SA-1) ಮತ್ತು ಎರಡು ಪೂರ್ವ ಸಿದ್ಧತಾ ಪರೀಕ್ಷೆಗಳಿಗೆ ಪ್ರಶ್ನೆಪತ್ರಿಕೆಗಳನ್ನು ಕೆ.ಎಸ್.ಇ.ಎ.ಬಿ ವತಿಯಿಂದ ಶಾಲಾ ಲಾಗಿನ್ನಲ್ಲಿ ಲಭ್ಯ ಮಾಡಲಾಗುವುದು.
17.ಸರ್ಕಾರದ ಆದೇಶ ಸಂಖ್ಯೆ:ಇಪಿ 90 ಎಸ್ಎಲ್ಬಿ 2024, ದಿನಾಂಕ:24.07.2024 ರಂತೆ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರುದಾಖಲಾಗಲು ಅವಕಾಶ ನೀಡಲಾಗಿದ್ದು, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗುವಂತೆ ಕ್ರಮವಹಿಸುವುದು. ಈ ಕುರಿತಾಗಿ ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳುವುದು.