ಬೆಂಗಳೂರು : ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್’ಗಳಲ್ಲಿ ‘ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ’ ಮತ್ತು ಮಕ್ಕಳ ವಿಶೇಷ ಗ್ರಾಮ ಸಭೆ ನಡೆಸುವಂತೆ ಸರ್ಕಾರ ಆದೇಶ ಹೊರಡಿಸಿದೆ ಹಾಗೂ ಸಭೆ ನಡೆಸುವ ಸಂಬಂಧ ಕೆಲವು ಪ್ರಮುಖ ಮಾಹಿತಿಗಳನ್ನು ಸುತ್ತೋಲೆಯಲ್ಲಿ ವಿವರವಾಗಿ ತಿಳಿಸಿದೆ.
ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 14 ನವಂಬರ್ 2024ರಿಂದ 24 ಜನವರಿ 2025 ರವರೆಗೆ, 10 ವಾರಗಳ ‘ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ’ ಮತ್ತು ಗ್ರಾಮ ಪಂಚಾಯತಿಗಳಲ್ಲಿ ಒಂದು ದಿನ “ಮಕ್ಕಳ ವಿಶೇಷ ಗ್ರಾಮ ಸಭೆ ನಡೆಸುವ ಕುರಿತು ಸೂಚನೆ ನೀಡಿದೆ.
ಮಕ್ಕಳ ಪರಿಸ್ಥಿತಿಯನ್ನು ತಳಮಟ್ಟದಿಂದಲೇ ಗಮನಿಸಿ ಅವಶ್ಯಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಎಲ್ಲಾ ಇಲಾಖೆಗಳು, ಜನಪ್ರತಿನಿಧಿಗಳು ಮತ್ತು ಸಮುದಾಯದ ಜವಾಬ್ದಾರಿಯಾಗಿದೆ. ಮಕ್ಕಳ ರಕ್ಷಣೆಗೆ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೂಪಿಸಿರುವ ಹಲವು ಯೋಜನೆಗಳ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಎಲ್ಲರ ಕರ್ತವ್ಯವಾಗಿರುತ್ತದೆ.
ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ಹಾಗೂ ಮಕ್ಕಳಿಗೆ ಸಂಬಂಧಿಸಿದ ಸಮಗ್ರ ಅಭಿವೃದ್ಧಿಯ ಅಂಶಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ‘ಮಕ್ಕಳ ಸ್ನೇಹಿ ಮತ್ತು ಮಕ್ಕಳ ಸುರಕ್ಷಿತ’ ಪಂಚಾಯತಿಗಳನ್ನಾಗಿಸಲು ಉಲ್ಲೇಖ(3)ರ ಸುತ್ತೋಲೆಯ ಮೂಲಕ 2020ರಿಂದ ಪ್ರತಿ ವರ್ಷವೂ ‘ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ’ವನ್ನು ಆಯೋಜಿಸಿ, ಈ ಅವಧಿಯಲ್ಲಿ ಒಂದು ದಿನ ಮಕ್ಕಳ ಗ್ರಾಮ ಸಭೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.
ಮುಂದುವರೆದು, ಉಲ್ಲೇಖಿತ (3)ರಿಂದ(6)ರ ಸುತ್ತೋಲೆಗಳಲ್ಲಿ ವಿವರವಾದ ಮಾರ್ಗಸೂಚಿ ನೀಡಲಾಗಿರುತ್ತದೆ. 2024-25ನೇ ಸಾಲಿನಲ್ಲಿ 14 ನವಂಬರ್ 2024ರಿಂದ 24 ಜನವರಿ 2025 ರವರೆಗೆ, 10 ವಾರಗಳ ‘ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ” ಮತ್ತು ಗ್ರಾಮ ಪಂಚಾಯತಿಗಳಲ್ಲಿ ಒಂದು ದಿನ “ಮಕ್ಕಳ ವಿಶೇಷ ಗ್ರಾಮ ಸಭೆ”ಯನ್ನು ಈ ಕೆಳಗೆ ವಿವರಿಸಿರುವಂತೆ ನಡೆಸಲು ನಿರ್ಣಯಿಸಲಾಗಿದೆ.
ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ ಮತ್ತು ಮಕ್ಕಳ ಗ್ರಾಮ ಸಭೆಯ ಪೂರ್ವ ಸಿದ್ಧತೆ: ಗ್ರಾಮ ಪಂಚಾಯತಿಗಳಿಂದ ವಿವಿಧ ಭಾಗೀದಾರರ ಸಹಭಾಗಿತ್ವದಲ್ಲಿ ಪೂರ್ವ ಸಿದ್ಧತೆಗಾಗಿ ಸಭೆಯನ್ನು ನಡೆಸಿ ಮಕ್ಕಳ ಸ್ನೇಹಿ ಅಭಿಯಾನದ ಕಾರ್ಯಚಟುವಟಿಕೆಗಳ ವೇಳಾ ಪಟ್ಟಿ ಮತ್ತು ಸಾಧಿಸಬೇಕಾದ ಗುರಿಗಳ ಕುರಿತು ಕಾರ್ಯಯೋಜನೆ ತಯಾರಿಸಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು.