ಬೆಂಗಳೂರು : ದುಬಾರಿ ದುನಿಯಾದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನಸಾಮಾನ್ಯರು ಬದುಕು ದಿನದಿಂದ ದಿನಕ್ಕೆ ದುಸ್ಥರವಾಗುತ್ತಿದೆ. ಬೆಲೆ ಏರಿಕೆಯ ಬಿಸಿ ಜನರ ಜೀವನದ ಮೇಲೆ ಬರೆ ಎಳೆದಂತಾಗಿದೆ. ಕೆಲ ದಿನಗಳ ಹಿಂದೆ ಬಿಎಂಟಿಸಿ ಬಸ್ ಪ್ರಯಾಣ ದರ, ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯಾಗಿತ್ತು. ನಂತರ ಆಟೋ ಪ್ರಯಾಣ ದರ ಕೂಡ ಹೆಚ್ಚಳವಾಗಲಿದೆ ಎಂದು ಹೇಳಲಾಗಿತ್ತು.
ಆದರೀಗ ಬೆಂಗಳೂರಿನ ಜನತೆಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದ್ದು, ಆಟೋ ದರ ಏರಿಕೆಗೆ ಜಿಲ್ಲಾಡಳಿತ ತಾತ್ಕಾಲಿಕ ಬ್ರೇಕ್ ಹಾಕಿದೆ. ಹೌದು. ಆಟೋ ದರ ಏರಿಕೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಯುಗಾದಿ ಹಬ್ಬಕ್ಕೆ ಆಟೋ ದರ ಏರಿಕೆಯಾಗುತ್ತದೆ ಎಂದು ಆಟೋ ಚಾಲಕರು ಖುಷಿಯಲ್ಲಿದ್ದರು. ಅವರ ಆಸೆಗೆ ಇದೀಗ ಜಿಲ್ಲಾಡಳಿತ ತಣ್ಣೀರೆರೆಚಿದೆ.
ಆಟೋ ದರ ಪರಿಷ್ಕರಣೆಗೆ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು, ಒಂದು ಕಿಮೀಗೆ 15 ರೂಪಾಯಿ ಇದ್ದು, ಅದನ್ನು 20 ರೂಗೆ ಏರಿಕೆ ಮಾಡಬೇಕು. 2 ಕಿಮೀಗೆ 40 ರೂ ಏರಿಕೆ ಮಾಡಬೇಕು ಎಂದು ಆಟೋ ಚಾಲಕ ಸಂಘಟನೆಗಳು ಮನವಿ ಮಾಡಿದ್ದವು.