ಬೆಂಗಳೂರು : ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಬೆಂಗಳೂರಲ್ಲಿ 2 ದಿನ ಮಾತ್ರ ಮದ್ಯ ಮಾರಾಟ ನಿಷೇಧಗೊಳಿಸಲಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ಮೂರು ದಿನ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು, ಇದೀಗ ಮತದಾನದ ದಿನ ಮತ್ತು ಮತ ಎಣಿಕೆ ದಿನದಂದು ಮಾತ್ರ ಮದ್ಯ ಮಾರಾಟಕ್ಕೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ.
ಫೆ.16 ರ ಬೆಳಗ್ಗೆ 6 ಗಂಟೆಯಿಂದ ಮತ್ತು ಫೆ.20 ರ ಬೆಳಗ್ಗೆ 6 ಗಂಟೆಯಿಂದ ಮದ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಗೊಳಿಸಲಾಗಿದ್ದು, ನ್ಯಾ. ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಆದೇಶ ಪ್ರಕಟಿಸಿದೆ.
ಫೆ.14 ರಿಂದ ಬೆಂಗಳೂರಿನಲ್ಲಿ ಮೂರು ದಿನ ಮದ್ಯ ಮಾರಾಟ ನಿಷೇಧ ಮಾಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಆದೇಶ ಹೊರಡಿಸಿದ್ದರು. ಮದ್ಯ ಮಾರಾಟ ನಿರ್ಬಂಧ ವಿಚಾರವಾಗಿ ಜಿಲ್ಲಾಧಿಕಾರಿಗಳ ಕ್ರಮ ಪ್ರಶ್ನಿಸಿ ಹೋಟೆಲ್ ಗಳ ಸಂಘಟನೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ಶಿಕ್ಷಕರು ಮದ್ಯ ಸೇವಿಸುತ್ತಾರೆಂದು ಭಾವಿಸಬೇಕಿಲ್ಲ. ಮುಕ್ತ, ನ್ಯಾಯಸಮ್ಮತ ಮತದಾನಕ್ಕೆ ಇಷ್ಟು ದಿನದ ನಿರ್ಬಂಧ ಅಗತ್ಯವಿಲ್ಲ, ಆಹಾರ ಪೂರೈಸಲು ರೆಸ್ಟೋರೆಂಟ್ ಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಹೈಕೋರ್ಟ್ ಹೇಳಿದೆ.