ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಎರಡನೇ ದಿನವೂ ನಿರೀಕ್ಷೆ ಮೀರಿ ಬಂಡವಾಳ ಹೂಡಿಕೆ ಹರಿದು ಬಂದಿದೆ.ವಿದೇಶಿ ಕಂಪನಿಗಳ ಜೊತೆಗೆ ಭಾರತ ಹಾಗೂ ಕರ್ನಾಟಕದ ಹಲವು ಹೆಸರಾಂತ ಕಂಪನಿಗಳು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಸರ್ಕಾರದ ಜೊತೆ ಸುಮಾರು ₹4 ಲಕ್ಷ ಕೋಟಿ ಮೊತ್ತದ ಒಪ್ಪಂದ ಮಾಡಿಕೊಂಡಿವೆ.
ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ರೂಪಿಸುವಲ್ಲಿ ಕರ್ನಾಟಕವು ಮಹತ್ವದ ಪಾತ್ರ ವಹಿಸಲಿದೆ. ರಾಜ್ಯದಲ್ಲಿ ಡೀಪ್-ಟೆಕ್, ಫಿನ್-ಟೆಕ್, ಫ್ಯೂಚರ್ ಇಂಡಸ್ಟ್ರಿಗಳಿಗೆ ಸಮೃದ್ಧ ಅವಕಾಶಗಳಿದ್ದು, ಕರ್ನಾಟಕವು ದೇಶವನ್ನು ಮುನ್ನಡೆಸಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವರಾದ ಪೀಯೂಷ್ ಗೋಯಲ್ ಅವರು ಪ್ರಶಂಸಿಸಿದ್ದಾರೆ.
ಪರಿಷ್ಕೃತ ಏಕಗವಾಕ್ಷಿ ಪೋರ್ಟಲ್ ಅಡಿ ʼಕರ್ನಾಟಕ ಉದ್ಯೋಗ ಮಿತ್ರʼದ ಮೂಲಕ ಹೂಡಿಕೆದಾರರಿಗೆ ಪ್ರಮಾಣಪತ್ರ ಆಧಾರಿತ ಅನುಮೋದನೆ (ಎಬಿಸಿ) ನೀಡಲಾಗುವುದು. ಹೀಗಾಗಿ ಉದ್ಯಮಿಗಳು ಅನುಮೋದನೆಗಳಿಗೆ ಕಾಯದೆ, ತಕ್ಷಣವೇ ಕಟ್ಟಡ ಕಾಮಗಾರಿ ಮತ್ತು ಇತರೆ ಸಿದ್ಧತೆ ಆರಂಭಿಸಬಹುದು. ಈ ವ್ಯವಸ್ಥೆಯನ್ನು ರಾಷ್ಟ್ರಮಟ್ಟದ ಏಕಗವಾಕ್ಷಿ ವ್ಯವಸ್ಥೆಯೊಂದಿಗೆ ಬೆಸೆಯಲಾಗಿದೆ. ಈ ಪೋರ್ಟಲ್ನಲ್ಲಿ ಕೈಗಾರಿಕೆಗೆ ಬೇಕಾದ ಭೂಮಿಯ ಹುಡುಕಾಟ, ಮಂಜೂರಾತಿ, ಕಟ್ಟಡ ನಕಾಶೆಗೆ ಅನುಮೋದನೆ ಮುಂತಾದ ಕೆಐಎಡಿಬಿ ಸೇವೆಗಳೂ ಸಿಗಲಿವೆ ಎಂದು ಕೈಗಾರಿಕೆ ಸಚಿವರಾದ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.