ನವದೆಹಲಿ: ಬ್ಯಾಂಕ್ ಉದ್ಯೋಗಿಗಳ ವಾರ್ಷಿಕ ವೇತನದಲ್ಲಿ ಶೇಕಡ 17ರಷ್ಟು ಏರಿಕೆಯಾಗಲಿದೆ ಎಂದು ಇಂಡಿಯಾನ್ ಬ್ಯಾಂಕ್ ಅಸೋಸಿಯೇಷನ್ ಮತ್ತು ಬ್ಯಾಂಕ್ ಉದ್ಯೋಗಿಗಳ ಸಂಘಗಳು ಮಾಹಿತಿ ನೀಡಿವೆ.
ಈ ಕುರಿತಾಗಿ ಬ್ಯಾಂಕ್ ಸಂಘಗಳ ಒಪ್ಪಂದಕ್ಕೆ ಒಪ್ಪಿಗೆ ವ್ಯಕ್ತವಾಗಿದೆ. ವೇತನ ಹೆಚ್ಚಳದಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ವಾರ್ಷಿಕ 8284 ಕೋಟಿ ರೂ. ಹೊರೆಯಾಗಲಿದೆ. ಸುಮಾರು 8 ಲಕ್ಷ ಬ್ಯಾಂಕು ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
2022ರ ನವೆಂಬರ್ ನಿಂದಲೇ ಅನ್ವಯವಾಗುವಂತೆ ವೇತನ ಹೆಚ್ಚಳ ಜಾರಿಗೆ ಬರಲಿದೆ ಎಂದು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಮಾಹಿತಿ ನೀಡಿದೆ. ವಾರಕ್ಕೆ ಐದು ದಿನಗಳಷ್ಟೇ ಕೆಲಸದ ದಿನಗಳಾಗಿ ಪರಿಗಣಿಸಲು ಸರ್ಕಾರ ಸಹಮತ ವ್ಯಕ್ತಪಡಿಸಿದೆ. ಸರ್ಕಾರಿ ಅಧಿಸೂಚನೆ ಹೊರಡಿಸುವುದು ಮಾತ್ರ ಬಾಕಿ ಇದೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಶೇ.4ರಷ್ಟು ತುಟ್ಟಿಭತ್ಯೆ(ಡಿಎ) ಹೆಚ್ಚಳವನ್ನು ಮೋದಿ ಸರ್ಕಾರ ಘೋಷಿಸಿದ ಒಂದು ದಿನದ ನಂತರ, ಭಾರತೀಯ ಬ್ಯಾಂಕ್‌ಗಳ ಸಂಘ ಮತ್ತು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು ಶುಕ್ರವಾರ ಶೇ.17ರಷ್ಟು ವಾರ್ಷಿಕ ವೇತನ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿವೆ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟವು ಎಲ್ಲಾ ಶನಿವಾರಗಳನ್ನು ರಜೆಯೆಂದು ಘೋಷಿಸಲು ಒಪ್ಪಿಕೊಂಡಿದೆ ಎಂದು ಹೇಳಿದೆ.
ಪರಿಷ್ಕೃತ ಕೆಲಸದ ಸಮಯವು ಸರ್ಕಾರದ ಅಧಿಸೂಚನೆಯ ನಂತರ ಜಾರಿಗೆ ಬರಲಿದೆ. ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ವೈದ್ಯಕೀಯ ಪ್ರಮಾಣಪತ್ರವನ್ನು ನೀಡದೆ ತಿಂಗಳಿಗೆ ಒಂದು ದಿನ ಅನಾರೋಗ್ಯ ರಜೆ ತೆಗೆದುಕೊಳ್ಳಲು ಅನುಮತಿಸಲಾಗಿದೆ. ಸಂಚಿತ ಸವಲತ್ತು ರಜೆಯನ್ನು 255 ದಿನಗಳವರೆಗೆ ಎನ್‌ಕ್ಯಾಶ್ ಮಾಡಬಹುದು ಎಂದು ಹೇಳಲಾಗಿದೆ.