ಬೆಂಗಳೂರು : ಫೆಬ್ರವರಿ 27 ರಿಂದ ಮಾರ್ಚ್ 3ರ ವರೆಗೆ ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳ ಆಯೋಜಿಸಲಾಗುತ್ತಿದ್ದು, ಸುಮಾರು 175 ಪುಸ್ತಕ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಮೇಳದಲ್ಲಿ ಪುಸ್ತಕಗಳ ಬಿಡುಗಡೆ, ಚರ್ಚೆ, ಸಂವಾದ ಕಾರ್ಯಕ್ರಮಗಳು ನಡೆಯಲಿವೆ. ಶಾಸಕರು ತಮ್ಮ ನಿಧಿಯಿಂದ 2 ರಿಂದ 3 ಲಕ್ಷ ರೂ.ಗಳವರೆಗೆ ಪುಸ್ತಕಗಳನ್ನು ಖರೀದಿಸಿ ತಮ್ಮ ಕ್ಷೇತ್ರದ ಸಾರ್ವಜನಿಕ ಗ್ರಂಥಾಲಯ ಹಾಗೂ ಶಾಲೆಗಳಿಗೆ ಪೂರೈಸಲು ಅವಕಾಶವಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವಜನರನ್ನು ಸಜ್ಜುಗೊಳಿಸಲು ಅಗತ್ಯವಿರುವ ಪಠ್ಯಪುಸ್ತಕಗಳು ಲಭ್ಯ ಇರಲಿವೆ. ಪ್ರತಿದಿನ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮೇಳಕ್ಕೆ ಪೂರಕವಾಗಿ ಆಹಾರಮೇಳ ಆಯೋಜಿಸಲಾಗುವುದು ಎಂದು ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ತಿಳಿಸಿದ್ದಾರೆ.