ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕಿತರ ಸಂಖ್ಯೆ 7,362ಕ್ಕೆ ಏರಿಕೆಯಾಗಿದೆ. ನಿನ್ನೆ ರಾಜ್ಯದಲ್ಲಿ 159 ಜನರಲ್ಲಿ ಸೋಂಕು ದೃಢಪಟ್ಟಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 95 ಪ್ರಕರಣಗಳು ದೃಢಪಟ್ಟಿದ್ದು, ಬೆಂಗಳೂರಿನಲ್ಲಿಡೆಂಗ್ಯೂ ಪ್ರಕರಣಗಳ ಸಂಖ್ಯೆ 2,083ಕ್ಕೆ ಹೆಚ್ಚಳವಾಗಿದೆ. ಇದುವರೆಗೂ ಡೆಂಗ್ಯೂಗೆ ಬಲಿಯಾದವರ ಸಂಖ್ಯೆ 7ಕ್ಕೆ ಏರಿದೆ. ಡೆಂಗ್ಯೂ ಪತ್ತೆ ಹಚ್ಚುವ ನಿಟ್ಟಿನಲ್ಲಿ ಕಳೆದ 24 ಗಂಟೆಗಳಲ್ಲಿ 892 ಪರೀಕ್ಷೆಗಳನ್ನು ನಡೆಸಲಾಗಿದೆ.
ಡೆಂಗ್ಯೂ ಸೋಂಕಿನ ಬಗ್ಗೆ ಜನರು ಮುನ್ನೆಚ್ಚರಿಕೆ ವಹಿಸಿ. ಮನೆ, ಕಚೇರಿ, ಅಂಗಡಿಗಳಲ್ಲಿ ಸ್ವಚ್ಚತೆ ಮುಖ್ಯ. ನಿಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರುವಂತೆ ಜಾಗೃತಿ ವಹಿಸಬೇಕು. ನೀರು ನಿಲ್ಲದಂತೆ ಕ್ರಮ ವಹಿಸುವುದು ಅಗತ್ಯ. ಬೆಳಗಿನ ಸಮಯದಲ್ಲಿ ಕಚ್ಚುವ ಸೊಳ್ಳೆಗಳು ಅಪಾಯಕಾರಿ. ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಮನೆಯ ಕಿಟಕಿಗಳನ್ನು ಮುಚ್ಚಿ, ಸೊಳ್ಳೆ ಬರದಂತೆ ಎಚ್ಚರವಹಿಸಿ.
ಲಕ್ಷಣಗಳು
ಇದ್ದಕ್ಕಿದ್ದಂತೆ ತೀವ್ರ ಜ್ವರ
ಕಣ್ಣುಗಳ ಹಿಂಭಾಗದಿಂದ ನೋವು
ವಾಂತಿ, ವಾಕರಿಕೆ
ದೇಹ ಮತ್ತು ಕೀಲು ನೋವುಗಳು
ರಕ್ತದಲ್ಲಿ ಹೆಚ್ಚಿದ ಹೆಮಟೋಕ್ರಿಟ್ (ಹಿಮೋಗ್ಲೋಬಿನ್).
ಅದೇ ಸಮಯದಲ್ಲಿ ಪ್ಲೇಟ್ಲೆಟ್ಗಳು ವೇಗವಾಗಿ ಕುಸಿಯುತ್ತವೆ.
ಹೊಟ್ಟೆ ನೋವು, ಆಯಾಸ
ಹೊಟ್ಟೆ ಅಥವಾ ಎದೆಯಲ್ಲಿ ನೀರಿನ ಶೇಖರಣೆ
ನಿಲ್ಲದೆ ವಾಂತಿ
ಒಸಡುಗಳಂತಹ ಭಾಗಗಳಿಂದ ರಕ್ತಸ್ರಾವ
ಚರ್ಮದ ಮೇಲೆ ಕೆಂಪು ಚುಕ್ಕೆಗಳ ಕಲೆಗಳು
ರಕ್ತದೊತ್ತಡದಲ್ಲಿ ಇಳಿಕೆ, ಮೂರ್ಛೆ