ಬೆಂಗಳೂರು: ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಡಿ ವೈ ಎಸ್ ಪಿ ಶಾಂತಕುಮಾರ್ ಅವರನ್ನು ಬಂಧಿಸಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಗೃಹ ಸಚಿವರು, ಡಿ ವೈ ಎಸ್ ಪಿ ಶಾಂತಕುಮಾರ್ ಅವರನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಅಷ್ಟೇ, ಬಂಧಿಸಿಲ್ಲ. ಶಾಂತಕುಮಾರ್ ವಿರುದ್ಧ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಸಿಕ್ಕರೆ ಅವರನ್ನು ಬಂಧಿಸುತ್ತಾರೆ ಎಂದರು.
ಹಲವು ಪೊಲೀಸ್ ಸಿಬ್ಬಂದಿಗಳನ್ನು ವಿಚಾರಣೆ ಮಾಡಲಾಗಿದೆ. ಪರೀಕ್ಷೆಯ ಪ್ರತಿಯೊಂದು ಕೇಂದ್ರದಲ್ಲೂ ಪೊಲೀಸರು ನೇಮಕಗೊಂಡಿದ್ದರು. ಆ ವೇಳೆ ಯಾರು ಯಾರು ಕೆಲಸ ಮಾಡಿದ್ದರು ಅವರನ್ನೆಲ್ಲಾ ವಿಚಾರಣೆ ನಡೆಸಲಾಗುತ್ತಿದೆ ಹಾಗೇ ಶಾಂತಕುಮಾರ್ ಅವರನ್ನು ವಿಚಾರಣೆ ಮಾಡಲಾಗಿದೆ ಎಂದು ಹೇಳಿದರು.
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ನೇಮಕಾತಿ ವಿಭಾಗದ ಡಿ ವೈ ಎಸ್ ಪಿ ಶಾಂತಕುಮಾರ್ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ವಶಕ್ಕೆ ಪಡೆದಿದ್ದ ಸಿಐಡಿ ಅವರನ್ನು ಬಂಧಿಸಿದೆ ಎಂದು ಹೇಳಲಾಗಿತ್ತು. ಆದರೆ ಶಾಂತಕುಮಾರ್ ಬಂಧನವಾಗಿಲ್ಲ ಎಂದು ಗೃಹ ಸಚಿವರೇ ಸ್ಪಷ್ಟಪಡಿಸಿದ್ದಾರೆ. ಪಿಎಸ್ಐ ಅಕ್ರಮದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ರಕ್ಷಣೆಗೆ ಪ್ಲಾನ್ ನಡೆದಿದೆಯೇ? ಸಿಐಡಿ ಅಧಿಕಾರಿಗಳು ಡಿ ವೈ ಎಸ್ ಪಿ ಬಂಧನಕ್ಕೆ ಹಿಂದೇಟು ಹಾಕುತ್ತಿರುವುದೇಕೆ ಎಂಬ ಅನುಮಾನಗಳು ವ್ಯಕ್ತವಾಗಿವೆ.