ಬೆಂಗಳೂರು : ಬೆಂಗಳೂರಿಗರಿಗೆ ಡಬಲ್ ಶಾಕ್ ಎದುರಾಗಿದ್ದು, ಶೀಘ್ರವೇ ನಮ್ಮ ಮೆಟ್ರೋ ಟಿಕೆಟ್ ದರ ಹಾಗೂ ನೀರಿನ ದರ ಹೆಚ್ಚಳವಾಗಲಿದೆ.
ಹೌದು. ಬೆಂಗಳೂರಿಗರ ಜೀವನಾಡಿಯಾಗಿರುವ ನಮ್ಮ ಮೆಟ್ರೋದಲ್ಲಿ ಪ್ರತಿನಿತ್ಯ ಸಾವಿರಾರು ಜನ ಸಂಚಾರ ಮಾಡುತ್ತಾರೆ. ಕಾರ್ಯಾಚರಣೆ ವೆಚ್ಚ ಅಧಿಕವಾದ ಹಿನ್ನೆಲೆ ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾಪ ಮಾಡಲಾಗಿದೆ.ಮೂಲಗಳ ಪ್ರಕಾರ ಶೀಘ್ರವೇ ಟಿಕೆಟ್ ದರ ಶೇ.15 ರಷ್ಟು ಏರಿಕೆಯಾಗಲಿದೆ. ನೇರಳೆ ಹಾಗೂ ಹಸಿರು ಮಾರ್ಗದ ಮೆಟ್ರೋ ಪ್ರಯಾಣ ದುಬಾರಿಯಾಗುವ ಸಾಧ್ಯತೆಯಿದೆ.
ಜನವರಿ 2 ಅಥವಾ 3 ನೇ ವಾರದಿಂದ ಟಿಕೆಟ್ ದರ ಹೆಚ್ಚಳವಾಗುವ ಸಾಧ್ಯತೆಯಿದೆ. ಬೋರ್ಡ್ ಮೀಟಿಂಗ್ ಬಳಿಕ ಟಿಕೆಟ್ ದರ ಏರಿಕೆಯಾಗಲಿದ್ದು, ಎಷ್ಟು ಪರ್ಸೆಂಟ್ ಹೆಚ್ಚಳ ಮಾಡಬೇಕೆಂದು ಸಭೆಯಲ್ಲಿ ಅಂತಿಮ ಮಾಡಲಾಗುತ್ತದೆ.ನಮ್ಮ ಮೆಟ್ರೋ ಟಿಕೆಟ್ ದರ ಏರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಎಂಅರ್ ಸಿಎಲ್ ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಕೋರಿತ್ತು.
ನೀರಿನ ದರ ಏರಿಕೆ
ಬಸ್ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್ ಎದುರಾಗಿದ್ದು, ಕಾವೇರಿ ನೀರಿನ ದರ ಏರಿಕೆಗೆ ಜಲಮಂಡಳಿ ಚಿಂತನೆ ನಡೆಸಿದೆ.
ನೀರಿನ ದರ ಏರಿಕೆ ಮಾಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲು ಜಲಮಂಡಳಿ ಸಿದ್ದತೆ ನಡೆಸಿದ್ದು, ಕೆಲವೇ ದಿನಗಳಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ನೀರಿನ ದರ ಏರಿಸಲು ಆದೇಶ ಹೊರಡಿಸಲಾಗುತ್ತದೆ ಎನ್ನಲಾಗಿದೆ. ಜನವರಿಯಲ್ಲೇ ನೀರಿನ ದರ ಏರಿಸಲಾಗುತ್ತಿದೆ.
ಜಲಮಂಡಳಿ ನೌಕರರು, ಸಿಬ್ಬಂದಿಗಳ ವೇತನ ಹೆಚ್ಚಳವಾಗಿದೆ. ಜಲಮಂಡಳಿಗೆ ಪ್ರತಿ ತಿಂಗಳು 81 ಕೋಟಿ ಹೊರೆಯಾಗುತ್ತಿದೆ , ಆದ್ದರಿಂದ ನೀರಿನ ದರ ಹೆಚ್ಚಳ ಮಾಡಲು ಸಿದ್ದತೆ ನಡೆಸಲಾಗಿದೆ ಎನ್ನಲಾಗಿದೆ. ಕಳೆದ ತಿಂಗಳು ಡಿಸಿಎಂ ಡಿ.ಕೆ.ಶಿವಕುಮಾರ್ ಕಾವೇರಿ ನೀರಿನ ದರ ಪರಿಷ್ಕರಣೆ ಮಾಡುವ ಬಗ್ಗೆ ಸುಳಿವು ನೀಡಿದ್ದರು.