ಬೆಂಗಳೂರು : ರಾಜ್ಯದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಯುವ ಸಂಸತ್ ಸ್ಪರ್ಧೆ’ ಆಯೋಜಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದಡಿ ಶಾಸಕಾಂಗದ ಕಾರ್ಯಚಟುವಟಿಕೆ, ಕಲಾಪಗಳ ವಿಧಾನ ಇತ್ಯಾದಿ ಅಂಶಗಳನ್ನು ಪರಿಚಯಿಸುವ ಸಂಬಂಧ ಸಂಸದೀಯ ವ್ಯವಹಾರಗಳ ಇಲಾಖೆಯ ಸಹಯೋಗದೊಂದಿಗೆ ಪ್ರತಿ ವರ್ಷ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಯುವ ಸಂಸತ್ ಸ್ಪರ್ಧೆಗಳನ್ನು ನಡೆಸುತ್ತಾ ಬಂದಿದೆ. ಇದು ಮಹತ್ವದ ಕಾರ್ಯಕ್ರಮವಾಗಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರುವುದರಿಂದ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸುವುದು ಉತ್ತಮ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯ ಪಟ್ಟಿದೆ.
ಸ್ಪರ್ಧೆಯ ಉದ್ದೇಶಗಳು
ಜನ ಪ್ರತಿನಿಧಿ ಸಂಸ್ಥೆಗಳ ಪಾತ್ರದ ಬಗ್ಗೆ ಅರಿವು ಮೂಡಿಸುವುದು.
ಪ್ರಜಾಪ್ರಭುತ್ವದ ಬುನಾದಿಯನ್ನು ಭದ್ರಪಡಿಸುವ ಹಾಗೂ ಇತರರ ಅಭಿಪ್ರಾಯಗಳ ಬಗ್ಗೆ ತಾಳ್ಮೆ ಮತ್ತು ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ಕೌಶಲ್ಯ ಬೆಳೆಸುವುದು.
ವಿದ್ಯಾರ್ಥಿಗಳಲ್ಲಿ ವಿಧಾನಸಭೆಯ ಕಾರ್ಯ ಕಲಾಪಗಳ ಬಗ್ಗೆ ತಿಳುವಳಿಕೆ ಮೂಡಿಸುವುದು.
ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣಗಳನ್ನು ಬೆಳೆಸುವುದು.
2024-25 ನೇ ಸಾಲಿನ ರಾಜ್ಯ ವಲಯದ ಯೋಜನೆ/ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲು ಉಲ್ಲೇಖಿತ ಆದೇಶ/ ಪತ್ರಗಳಂತೆ ತೀರ್ಮಾನಿಸಿ ಅನುದಾನ ನಿಗಧಿಪಡಿಸಲಾಗಿದೆ. ಅದರಂತೆ ಉಪನಿರ್ದೇಶಕರು(ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು ಮತ್ತು ಇಲಾಖೆಯ ಅಧಿಕಾರಿಗಳು ಸಮುದಾಯದ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸೂಚಿಸಿದೆ.
1. ಶಾಲಾ ಮಟ್ಟದ ಯುವ ಸಂಸತ್ ಸ್ಪರ್ಧೆ:
ಶಾಲೆಯ ಪ್ರತಿ ತರಗತಿಯ (8,9ಮತ್ತು 10) ವಿದ್ಯಾರ್ಥಿಗಳಿಗೆ ಈ ಕೆಳಕಂಡ ಮಾದರಿಯ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಕಲಾಪದ ಅವಧಿ; 1.1/2 ಗಂಟೆ.ಗೆ ಸೀಮಿತಗೊಳಿಸಿ ಆಗಸ್ಟ್-2024 ಮಾಹೆಯೊಳಗೆ ಕಾರ್ಯಕ್ರಮವನ್ನು ಶಾಸನ ಸಭೆಯ ಮಾದರಿಯಲ್ಲಿ ನಡೆಸುವುದು
1. ಸಭಾಪತಿ- 1 ವಿದ್ಯಾರ್ಥಿ
2. ಮುಖ್ಯ ಮಂತ್ರಿ- 1 ವಿದ್ಯಾರ್ಥಿ
3. ಸಂಪುಟ ಸಚಿವರು- 5 ವಿದ್ಯಾರ್ಥಿ ಗಳು
4. ವಿರೋಧ ಪಕ್ಷದ ನಾಯಕ- 1 ವಿದ್ಯಾರ್ಥಿ
5. ಆಡಳಿತ ಪಕ್ಷದ ಶಾಸಕರು- 2 ವಿದ್ಯಾರ್ಥಿ ಗಳು
6. ವಿರೋಧ ಪಕ್ಷದ ಶಾಸಕರು- 2 ವಿದ್ಯಾರ್ಥಿ ಗಳು
ಒಟ್ಟು 12 ವಿದ್ಯಾರ್ಥಿಗಳು