ಬೆಂಗಳೂರು : ಮಲ್ಲೇಶ್ವರಂ ಬಿಬಿಎಂಪಿ ಗ್ರೌಂಡ್ನಲ್ಲಿ ಗೇಟ್ ಬಿದ್ದು ಇತ್ತೀಚೆಗೆ ಸಾವಿಗೀಡಾದ ಬಾಲಕ ನಿರಂಜನ್ ಅವರ ನಿವಾಸಕ್ಕೆ ಇಂದು ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದ ಡಿಸಿಎಂ ಡಿಕೆ ಶಿವಕುಮಾರ್ ಹಾಗೆಯೇ 10 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ನೀಡಿ ಕುಟುಂಬದವರಿಗೆ ಸಾಂತ್ವನ ತಿಳಿಸಿದರು.
ನಂತರ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಇದೊಂದು ಮನ ಕಲಕುವ ದುರಂತ ಅಂದ್ರೆ ತಪ್ಪಾಗಲ್ಲ. ಆಡುವ ವಯಸ್ಸಿನಲ್ಲಿ ಮಕ್ಕಳನ್ನು ಕಳೆದುಕೊಳ್ಳುವಂತಹ ನೋವು ಯಾರಿಗೂ ಬೇಡ. ಇಂತಹ ನೋವಿನಲ್ಲಿ ಮಗನ ನೇತ್ರದಾನ ಮಾಡಿ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಬಡತನದಲ್ಲಿ ನಿಜವಾದ ಮಾನವೀಯತೆ ಬದುಕಿದೆ ಎನ್ನುವುದಕ್ಕೆ ಇದೊಂದು ನಿದರ್ಶನ.
ನಮ್ಮ ಪಕ್ಷದ ಕಾರ್ಯಕರ್ತರು 5 ಲಕ್ಷ ರೂ. ನೀಡಿದ್ದು, ಬಿಬಿಎಂಪಿ 5 ಲಕ್ಷ ರೂ. ಪರಿಹಾರ ನೀಡಿದೆ. ಸಚಿವರಾದ ದಿನೇಶ್ ಗುಂಡೂರಾವ್ ಅವರ ಫೌಂಡೇಷನ್ ವತಿಯಿಂದ ಮೃತ ನಿರಂಜನ್ ಅವರ ಸಹೋದರಿಯ ಶಿಕ್ಷಣದ ಖರ್ಚನ್ನು ನೋಡಿಕೊಳ್ಳಲು ಮುಂದೆ ಬಂದಿರುವುದು ಖುಷಿಯ ವಿಚಾರ ಎಂದರು.