ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಇರುವವರ ಸಂಪರ್ಕದಲ್ಲಿದ್ದ ಹೆಚ್ಚಿನ ಅಪಾಯದ ರೋಗ ಲಕ್ಷಣಗಳು ಇರುವವರಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ನಡೆಸಲು ಕೋವಿಡ್ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಕುರಿತು ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು, ದೇಶದಲ್ಲಿಯೇ ಕರ್ನಾಟಕದಲ್ಲಿ ಅತಿಹೆಚ್ಚು ಕೋವಿಡ್ ಟೆಸ್ಟ್‌ಗಳನ್ನು ನಡೆಸಲಾಗುತ್ತಿದ್ದು, ಸೋಂಕು ಕಡಿಮೆಯಾಗುವರೆಗೂ ಹೆಚ್ಚಿನ ಪರೀಕ್ಷೆ ನಡೆಸಲು ಮತ್ತು ಚಿಕಿತ್ಸೆ ನೀಡಲು ಸೂಚಿಸಿದ್ದೇನೆ. ಐಸಿಯುನಲ್ಲಿ ಇರುವವರ ಮೇಲೆ ಟೆಲಿ ಐಸಿಯು ಮೂಲಕ ವಿಶೇಷ ನಿಗಾ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಇದುವರೆಗೂ ಕೋವಿಡ್ ಪಾಸಿಟಿವ್ ಬಂದವರಲ್ಲಿ 26 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ 21 ಜನರ ಡೆತ್ ಆಡಿಟ್ ನಡೆಸಲಾಗಿದ್ದು, ಇಬ್ಬರು ಮಾತ್ರ ಕೋವಿಡ್ ಕಾರಣದಿಂದ ಸಾವಿಗಿಡಾಗಿರುವುದು ಗೊತ್ತಾಗಿದೆ. ಉಳಿದವರು ಕೋವಿಡ್ ಜೊತೆಗೆ ಇತರ ಕಾಯಿಲೆಗಳಿಂದಲೂ ಬಳಲುತ್ತಿದ್ದರು ಎಂದು ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ.