ಲಕ್ನೋ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಜಿ ಸಂಸದೆ ಮತ್ತು ನಟಿ ಜಯಪ್ರದಾ ಅವರನ್ನು ಬಂಧಿಸಿ ಮಾರ್ಚ್ 6 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಉತ್ತರ ಪ್ರದೇಶದ ರಾಂಪುರ ನ್ಯಾಯಾಲಯ ಮಂಗಳವಾರ ಪೊಲೀಸರಿಗೆ ನಿರ್ದೇಶನ ನೀಡಿದೆ.
ರಾಂಪುರದ ಮಾಜಿ ಸಂಸದರ ವಿರುದ್ಧ ಕೆಮರಿ ಮತ್ತು ಸ್ವರ್ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ ಅಮರನಾಥ್ ತಿವಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಟಿ 2019 ರ ಚುನಾವಣೆಯಲ್ಲಿ ರಾಂಪುರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದರು ಮತ್ತು ಸಮಾಜವಾದಿ ಪಕ್ಷದ ಅಜಂ ಖಾನ್ ವಿರುದ್ಧ ಸೋತಿದ್ದರು. ಈ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಎರಡು ಪ್ರಕರಣ ದಾಖಲಾಗಿತ್ತು.
ವಿಶೇಷ ಸಂಸದ-ಶಾಸಕ ನ್ಯಾಯಾಲಯವು ಹಲವಾರು ಬಾರಿ ಸಮನ್ಸ್ ಹೊರಡಿಸಿತ್ತು ಆದರೆ ಮಾಜಿ ಸಂಸದರು ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ. ತರುವಾಯ, ಜಯಪ್ರದಾ ವಿರುದ್ಧ ಏಳು ಬಾರಿ ಜಾಮೀನು ರಹಿತ ವಾರಂಟ್ ಹೊರಡಿಸಲಾಯಿತು, ಆದರೆ ಪೊಲೀಸರು ಜನಪ್ರದಾ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಾಧ್ಯವಾಗಲಿಲ್ಲ.
ಜಯಪ್ರದಾ ಬಂಧನದಿಂದ ತಪ್ಪಿಸಿಕೊಂಡಿದ್ದಾರೆ ಮತ್ತು ಅವರ ಎಲ್ಲಾ ಮೊಬೈಲ್ ಸಂಖ್ಯೆಗಳು ಸ್ವಿಚ್ ಆಫ್ ಆಗಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಉತ್ತರದಲ್ಲಿ ತಿಳಿಸಿದ್ದಾರೆ ಎಂದು ಅವರು ಹೇಳಿದರು.
ರಾಂಪುರದ ಪೊಲೀಸ್ ಅಧೀಕ್ಷಕರಿಗೆ ಸರ್ಕಲ್ ಆಫೀಸರ್ ನೇತೃತ್ವದಲ್ಲಿ ತಂಡವನ್ನು ರಚಿಸಿ ಜಯಪ್ರದಾ ಅವರನ್ನು ಬಂಧಿಸಿ ಮಾರ್ಚ್ 6 ರಂದು ಮುಂದಿನ ವಿಚಾರಣೆಯ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಲಾಗಿದೆ.