ಬೆಂಗಳೂರು : ಸಿಎಂ ಸಿದ್ದರಾಮಯ್ಯ ಇಂದು ಮಹತ್ವದ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಈ ಅವಧಿಯ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್ ಇದಾಗಲಿದೆ. ಈಗಾಗಲೇ 13 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಇದೀಗ 14 ನೇ ಬಾರಿ ಬಜೆಟ್ ಮಂಡಿಸಲಿದ್ದಾರೆ. ಸಿದ್ದರಾಮಯ್ಯ ಬಜೆಟ್ ಮೇಲೆ ರಾಜ್ಯ ಜನರ ನಿರೀಕ್ಷೆ ಹೆಚ್ಚಾಗಿದೆ.
ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಸಿಎಂ ಸಿದ್ದರಾಮಯ್ಯ ಬಜೆಟ್ ಮೇಲೆ ರಾಜ್ಯದ ಜನರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇವುಗಳನ್ನೆಲ್ಲಾ ಗಮನದಲ್ಲಿ ಇರಿಸಿಕೊಂಡು, ಮುಂದಿನ ಚುನಾವಣೆಗೂ ಅನುಕೂಲವಾಗುವಂತೆ, ಶ್ರೀಸಾಮಾನ್ಯನಿಗೆ ಹೊರೆಯಾಗದಂತೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಾರಾ ಎಂಬ ಪ್ರಶ್ನೆಗೆ ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ.
ಸಿಎಂ ಸಿದ್ದರಾಮಯ್ಯ ಅವರು 14 ನೇ ಬಾರಿಗೆ ರಾಜ್ಯ ಸರ್ಕಾರದ ಆಯವ್ಯಯ ಮಂಡಿಸಿ ದಾಖಲೆ ನಿರ್ಮಿಸುತ್ತಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ದೂರ ದೃಷ್ಟಿ ಆಲೋಚನೆಗಳನ್ನು ಕ್ರೂಢೀಕರಿಸಿ ಮಹತ್ವದ ಬಜೆಟ್ ಮಂಡನೆ ಮಾಡಲಿದ್ದು, ರಾಜ್ಯದ ಜನರ ಚಿತ್ತ ಸಿಎಂ ಸಿದ್ದರಾಮಯ್ಯರತ್ತ ನೆಟ್ಟಿದೆ.
ಚುನಾವಣೆಗೂ ಮುನ್ನ ರಾಜ್ಯ ಕಾಂಗ್ರೆಸ್ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳ ಜೊತೆಗೆ ಹಲವು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದ್ದು, ಕೊಟ್ಟ ಭರವಸೆಯಂತೆ ಅಂಗನವಾಡಿ, ಆಶಾ ಕಾರ್ಯಕರ್ತರ ಗೌರವಧನ ಹೆಚ್ಚಳ ಮಾಡಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ಜೊತೆಗೆ ಬಜೆಟ್ ಪೂರ್ವ ತಯಾರಿ ಸಭೆಗಳನ್ನು ನಡೆಸಿದ್ದು, ಇದೀಗ ಅಂತಿಮ ಟಚ್ ನೀಡುತ್ತಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದು ನಿರ್ಣಯಕ ಬಜೆಟ್ ಆಗಿದ್ದು, ಜನಪ್ರಿಯ ಘೋಷಣೆ, ಚುನಾವಣಾ ಲಾಭಾ ತರುವ ಆಯವ್ಯಯ ಮಂಡಿಸಲು ಸಿಎಂ ತಯಾರಿ ನಡೆಸಿದ್ದಾರೆ.