ಬೆಂಗಳೂರು : ಅಸ್ಸಾಂ ನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ತಡೆ ಹಾಗೂ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರು ಸೇರಿ ರಾಜ್ಯದ ಹಲವು ಕಡೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ.
ಅಸ್ಸಾಂನ ಹೈಬೋರಗಾಂವ್ನಲ್ಲಿ ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಶಂಕರ ದೇವ ಸತ್ರ ದೇವಸ್ಥಾನಕ್ಕೆ ಭೇಟಿ ನೀಡಲು ಅಧಿಕಾರಿಗಳು ಅನುಮತಿ ನೀಡಲಿಲ್ಲ. ಇದರಿಂದ ಭಾರಿ ಹೈ ಡ್ರಾಮಾ ನಡೆಯಿತು. ದೇವಸ್ಥಾನಕ್ಕೆ ಭೇಟಿ ನೀಡಲು ರಾಹುಲ್ ಗಾಂಧಿಗೆ ಅನುಮತಿ ನಿರಾಕರಿಸಿದ್ದನ್ನು ವಿರೋಧಿಸಿ ಮಹಿಳಾ ಕಾಂಗ್ರೆಸ್ ಮುಖಂಡರು ಧರಣಿ ನಡೆಸಿದ್ದರು. ಅಲ್ಲದೇ ಕಳೆದ ಕೆಲವು ದಿನಗಳ ಹಿಂದೆ ಅಸ್ಸಾಂ ನಲ್ಲಿ ದುಷ್ಕರ್ಮಿಗಳು ಭಾರತ್ ಜೋಡೋ ನ್ಯಾಯ್ ಯಾತ್ರೆಯ ಪೋಸ್ಟರ್ ಹರಿದು ಕಲ್ಲು ತೂರಾಟ ನಡೆಸಿದ್ದರು. ಈ ಎಲ್ಲಾ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಬೆಂಗಳೂರು ಸೇರಿ ರಾಜ್ಯದ ಹಲವು ಕಡೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ.
ಅಸ್ಸಾಂ ನಲ್ಲಿ ದೇಗುಲಕ್ಕೆ ಭೇಟಿ ನೀಡದಂತೆ ತಮ್ಮನ್ನು ಏಕೆ ತಡೆದಿದ್ದಾರೆ ಎಂದು ರಾಹುಲ್ ಗಾಂಧಿ ಪೊಲೀಸರನ್ನು ಪ್ರಶ್ನಿಸಿದ್ದಾರೆ. ದೇವಸ್ಥಾನಕ್ಕೆ ಯಾವಾಗ, ಯಾರು ಭೇಟಿ ನೀಡಬೇಕು ಎಂದು ಪ್ರಧಾನಿ ನಿರ್ಧರಿಸುತ್ತಾರೆಯೇ ಎಂದು ರಾಹುಲ್ ಕಿಡಿಕಾರಿದ್ದರು. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರಧಾನಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಅವಕಾಶ ನೀಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.