ಬೆಂಗಳೂರು : ಯಾವುದೇ ಕಾರಣಕ್ಕೂ ನಮ್ಮ ಗ್ಯಾರಂಟಿಗಳು ನಿಲ್ಲುವುದಿಲ್ಲ, ಕಾಂಗ್ರೆಸ್ ಗ್ಯಾರಂಟಿಗಳಿಗೆ ಐದು ವರ್ಷ ವಾರಂಟಿ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್, ರಸಗೊಬ್ಬರ, ಅಡುಗೆ ಎಣ್ಣೆ, ಬೇಳೆ-ಕಾಳು, ತರಕಾರಿ ಸೇರಿ ಪ್ರತಿಯೊಂದರ ಬೆಲೆಯನ್ನು ವಿಪರೀತ ಏರಿಸಿತ್ತು. ಇದರಿಂದ ನಾಡಿನ ಪ್ರತೀ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈ ಸಂಕಷ್ಟಕ್ಕೆ ಸ್ಪಂದಿಸಿ ಕಷ್ಟ ಕಡಿಮೆ ಮಾಡುವ ಉದ್ದೇಶದಿಂದ ಐದು ಗ್ಯಾರಂಟಿ ಭರವಸೆಗಳನ್ನು ಘೋಷಿಸಿದೆವು. ಅಧಿಕಾರಕ್ಕೆ ಬಂದು ಐದಕ್ಕೆ ಐದನ್ನೂ ಜಾರಿ ಮಾಡಿದೆವು. ಮೊದಲಿಗೆ ಗ್ಯಾರಂಟಿಗಳ ಜಾರಿ ಸಾಧ್ಯವೇ ಇಲ್ಲ ಎನ್ನುವ ಸುಳ್ಳನ್ನು ಬಿಜೆಪಿ ಹುಟ್ಟಿಸಿತು. ಗ್ಯಾರಂಟಿಗಳು ಜಾರಿಯಾದ ಬಳಿಕ ಗ್ಯಾರಂಟಿಗಳು ನಿಂತು ಹೋಗುತ್ತವೆ ಎನ್ನುವ ಹೊಸ ಸುಳ್ಳು ಸೃಷ್ಟಿಸಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಗ್ಯಾರಂಟಿಗಳು ನಿಲ್ಲುವುದಿಲ್ಲ. ಕಾಂಗ್ರೆಸ್ ಗ್ಯಾರಂಟಿಗಳಿಗೆ ಐದು ವರ್ಷ ವಾರಂಟಿ ಇದೆ. ಸೋಲುವ ಭೀತಿಯಿಂದ ಬಿಜೆಪಿ ಸೃಷ್ಟಿಸುವ ಸುಳ್ಳುಗಳಿಗೆ ಸೊಪ್ಪಾಕಬೇಡಿ.
ಬಿಜೆಪಿ ಸುಳ್ಳಿನ ಕಾರ್ಖಾನೆ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡು ನಿಮ್ಮ ಮತಕ್ಕೆ ಘನತೆ ತಂದಿದ್ದೇವೆ. ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಿಸಿ ನಿಮ್ಮ ಮತಕ್ಕೆ ಮೌಲ್ಯ ತಂದು ಕೊಡುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕನ್ನಡಿಗರಾದ ನಮ್ಮೆಲ್ಲರ ಸ್ವಾಭಿಮಾನದ ಪ್ರಶ್ನೆ
ಪ್ರತಿ ವರ್ಷ ಕನ್ನಡಿಗರ ಬೆವರಗಳಿಕೆಯ ರೂ. 4.30 ಲಕ್ಷ ಕೋಟಿ ತೆರಿಗೆ ಸಂಗ್ರಹಿಸುವ ಕೇಂದ್ರ ಸರ್ಕಾರ ನಮಗೆ ವಾಪಾಸು ಕೊಟ್ಟಿರುವುದು ಕೇವಲ 50,257 ಕೋಟಿ ರೂಪಾಯಿ. ಅಂದರೆ ನಾವು 100 ರೂಪಾಯಿ ತೆರಿಗೆ ಪಾವತಿ ಮಾಡಿದರೆ ನಮಗೆ 12 ರಿಂದ 13 ರೂಪಾಯಿ ಮರಳಿ ಬರುತ್ತಿದೆ. ಕರ್ನಾಟಕಕ್ಕೆ ಜಿಎಸ್ಟಿಯಲ್ಲಿ, ವಿಶೇಷ ಅನುದಾನದಲ್ಲಿ, ಬರ ಪರಿಹಾರದಲ್ಲಿ, ಭದ್ರಾ ಮೇಲ್ದಂಡೆ ಯೋಜನೆಯ ಅನುದಾನದಲ್ಲಿ, ಗೃಹನಿರ್ಮಾಣ ಯೋಜನೆಯಲ್ಲಿ, ಅನ್ನಭಾಗ್ಯದ ಅಕ್ಕಿಯಲ್ಲಿ ಹೀಗೆ ಸಾಲು ಸಾಲು ಅನ್ಯಾಯವಾಗಿದೆ. ಈ ಅನ್ಯಾಯದ ವಿರುದ್ಧ ಪ್ರತಿಯೊಬ್ಬ ಕನ್ನಡಿಗನು ದನಿ ಎತ್ತಬೇಕಾಗಿದೆ. ಇದು ಕನ್ನಡಿಗರಾದ ನಮ್ಮೆಲ್ಲರ ಸ್ವಾಭಿಮಾನದ ಪ್ರಶ್ನೆಯೂ ಹೌದು ಎಂದಿದ್ದಾರೆ.