![](https://kannadadunia.com/wp-content/uploads/2021/07/farmers-farmers-kisan-A.png)
ಬೆಂಗಳೂರು : ರಾಜ್ಯದ ಸಹಕಾರ ಸಂಸ್ಥೆ ಮೂಲಕ ಸಾಲ ಪಡೆದು ದಿನಾಂಕ:31.12.2023 ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಅಸಲು ಪಾವತಿಸಿದಲ್ಲಿ ಅದರ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಸರ್ಕಾರದ ಆದೇಶದಲ್ಲಿ, ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ರಾಜ್ಯದಲ್ಲಿ ಉದ್ಭವಿಸಿರುವ ಅನಾವೃಷ್ಟಿಗಳ ಹಿನ್ನೆಲೆಯಲ್ಲಿ ರಾಜ್ಯದ ರೈತರು ಸಹಕಾರ ಸಂಸ್ಥೆಗಳಿಂದ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ಪಡೆದು ಸಾಲ ಮರುಪಾವತಿಸಲು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದನ್ನು ಮತ್ತು ಇದರಿಂದ ಸಹಕಾರ ಸಂಸ್ಥೆಗಳು ನಬಾರ್ಡ್ ನಿಂದ ಪಡೆದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೇ ಪುನಃ ರೈತರಿಗೆ ಸಾಲ ನೀಡಲು ತೊಂದರೆಯಾಗುತ್ತಿರುವುದನ್ನು ಮನಗಂಡು ಇಂತಹ ಸುಸ್ತಿದಾರರಾದ ರೈತರನ್ನು ಋಣಮುಕ್ತರನ್ನಾಗಿ ಮಾಡಿ ಮುಂದಿನ ತಮ್ಮ ಕೃಷಿ ಚಟುವಟಿಕೆಗಳಿಗೆ ಸಾಲ ಪಡೆದು ಅರ್ಹತೆ ಗಳಿಸಲು ಸರ್ಕಾರವು ಯೋಜನ ರೂಪಿಸುವುದು ಅತ್ಯವಶ್ಯಕವಾಗಿರುತ್ತದೆ.
ಮೇಲೆ ಓದಲಾದ (2) ರ ಸಹಕಾರ ಸಂಘಗಳ ನಿಬಂಧಕರ ಪತ್ರದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಗಳನ್ನು ಪಡೆದು ದಿನಾಂಕ:31.12.2023ರ ಅಂತ್ಯಕ್ಕೆ ಸಹಕಾರ ಸಂಸ್ಥೆಗಳಿಗೆ 56,879 ರೈತರಿಂದ ರೂ. 58,515.96 ಲಕ್ಷಗಳ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲಗಳು ಸುಸ್ತಿಯಾಗಿದ್ದು, ಇದರ ಮೇಲಿನ ಬಡ್ಡಿ, ಬಾಬು ರೂ. 44,020.50 ಲಕ್ಷಗಳಾಗಿರುತ್ತವ ಎಂದು ತಿಳಿಸಿರುತ್ತಾರೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರೈತರು ರಾಜ್ಯದ ಸಹಕಾರ ಸಂಘಗಳು ಅಂದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದು ದಿನಾಂಕ:31.12.2023 ಕ್ಕೆ ಸುಸ್ತಿಯಾಗಿರುವ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಕಂತುಗಳ ಅಸಲನ್ನು ದಿನಾಂಕ:29.02.2024 ರೊಳಗೆ ಸಂಬಂಧಪಟ್ಟ ಪತ್ತಿನ ಸಹಕಾರ ಸಂಘ/ಬ್ಯಾಂಕುಗಳಿಗೆ ಪೂರ್ತಿಯಾಗಿ ಮರುಪಾವತಿಸಿದಲ್ಲಿ ಈ ಮೊತ್ತಕ್ಕೆ ಬಾಕಿ ಇರುವ ಬಡ್ಡಿಯನ್ನು ಮನ್ನಾ ಮಾಡಲು ಮತ್ತು ಈ ರೀತಿ ಮನ್ನಾ ಮಾಡಿದ ಬಡ್ಡಿ ಮೊಬಲಗನ್ನು ಸಹಕಾರ ಸಂಘಗಳಿಗೆ ಸರ್ಕಾರವು ಭರ್ತಿ ಮಾಡಲು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರಾತಿ ನೀಡಲಾಗಿದೆ.
ಷರತ್ತುಗಳು :
- ಈ ಸೌಲಭ್ಯವು ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದು ದಿನಾಂಕ:31.12.2023 ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ.
- ಈ ಯೋಜನೆ ಕೃಷಿಯೇತರ ಸಾಲಗಳಿಗೆ ಅನ್ವಯವಾಗುವುದಿಲ್ಲ ಮತ್ತು ಮೇಲೆ ತಿಳಿಸಿರುವ ಸಂಸ್ಥೆಗಳನ್ನು ಹೊರತುಪಡಿಸಿ ಇತರೆ ಸಹಕಾರ ಸಂಸ್ಥೆಗಳಲ್ಲಿ ಪಡೆದ ಸಾಲಗಳಿಗೆ ಅನ್ವಯಿಸುವುದಿಲ್ಲ. ನಬಾರ್ಡ್ ಗುರುತಿಸಿದ ಕೃಷಿ / ಕೃಷಿ ಸಂಬಂಧಿತ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ಅಂದರೆ ಲಘು ನೀರಾವರಿ, ಭೂ ಅಭಿವೃದ್ಧಿ, ಸಾವಯವ ಕೃಷಿ, ಪಶುಸಂಗೋಪನೆ ಹಾಗೂ ಹೈನುಗಾರಿಕೆ, ಮೀನು ಕೃಷಿ, ರೇಷ್ಮೆ ಕೃಷಿ, ಕೃಷಿ ಯಾಂತ್ರೀಕರಣ, ಪ್ಲಾಂಟೇಷನ್ ಹಾಗೂ ತೋಟಗಾರಿಕೆ ಅಭಿವೃದ್ಧಿ ಉದ್ದೇಶಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಮುಂದುವರೆದು, ರಾಜ್ಯ ಸರ್ಕಾರದ ಬಡ್ಡಿ ರಿಯಾಯತಿ ಬದ್ಧತೆಯಡಿ ವಿತರಿಸಿರುವ ಕೃಷಿ / ಕೃಷಿ ಸಂಬಂಧಿತ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ.
- ಕೃಷಿ ಪತ್ತಿನ ಸಹಕಾರ ಸಂಘ/ಬ್ಯಾಂಕುಗಳಿಂದ ಪಡೆದು ದಿನಾಂಕ:31.12.2023 ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಅಸಲನ್ನು ದಿನಾಂಕ:29.02.2024 ರೊಳಗೆ ಸಂಬಂಧಪಟ್ಟ ಸಂಸ್ಥೆಗಳಿಗೆ ಸಾಲ ಪಡೆದ ರೈತರು ಮರುಪಾವತಿ ಮಾಡಿದಲ್ಲಿ ಸದರಿ ಸಾಲಗಳ ಮೇಲಿನ ಮರುಪಾವತಿ ದಿನಾಂಕದವರೆಗಿನ ಬಡ್ಡಿಯನ್ನು ಮನ್ನಾ ಮಾಡಿ ಸಂಬಂಧಪಟ್ಟ ಸಹಕಾರಿ ಸಂಸ್ಥೆಗಳಿಗೆ ಸರ್ಕಾರ ಭರಣ ಮಾಡುವುದು. ಈ ಯೋಜನೆಯು ಮಾರಿಟೋರಿಯಂ ಅವಧಿಯಲ್ಲಿ ಸುಸ್ತಿಯಾಗಿರುವ ಬಡ್ಡಿಗೂ ಸಹ ಅನ್ವಯವಾಗುತ್ತದೆ.
![](https://kannadadunia.com/wp-content/uploads/2024/01/WhatsApp-Image-2024-01-21-at-6.27.57-PM-1.jpeg)
![](https://kannadadunia.com/wp-content/uploads/2024/01/WhatsApp-Image-2024-01-21-at-6.27.57-PM.jpeg)
![](https://kannadadunia.com/wp-content/uploads/2024/01/WhatsApp-Image-2024-01-21-at-6.27.58-PM-1.jpeg)
![](https://kannadadunia.com/wp-content/uploads/2024/01/WhatsApp-Image-2024-01-21-at-6.27.58-PM.jpeg)