ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, ಏಪ್ರಿಲ್ 26ರಂದು ಮೊದಲ ಹಂತ ಹಾಗೂ ಮೇ 7 ರಂದು ಎರಡನೇ ಹಂತದಲ್ಲಿ ತಲಾ 14 ಕ್ಷೇತ್ರಗಳಂತೆ ಒಟ್ಟು 28 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.
ಲೋಕಸಭಾ ಚುನಾವಣೆಗೆ ದೇಶದಾದ್ಯಂತ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 16 ರಿಂದ ಚುನಾವಣಾ ನೀತಿ ಸಮಿತಿ ಜಾರಿಯಾಗಿತ್ತು. ಜೂನ್ 4 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಆ ಬಳಿಕ ಅಂದರೆ ಜೂನ್ 6 ರಂದು ಕೇಂದ್ರ ಚುನಾವಣಾ ಆಯೋಗ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿರುವ ಘೋಷಣೆಯನ್ನು ಹೊರಡಿಸಲಿದೆ. ಹೀಗಾಗಿ ಅಲ್ಲಿಯವರೆಗೂ ನೀತಿ ಸಂಹಿತೆ ಜಾರಿಯಲ್ಲಿರಲಿದೆ.
ಕರ್ನಾಟಕದಲ್ಲಿ ಈಗಾಗಲೇ ಎರಡು ಹಂತದ ಮತದಾನವು ಮುಕ್ತಾಯಗೊಂಡಿರುವುದರಿಂದ ನೀತಿ ಸಂಹಿತೆ ಸಡಿಲಿಕೆ ಮಾಡಬಹುದು. ಇದರಿಂದ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಕೆಲವೊಂದು ಪ್ರಮುಖ ನಿರ್ಣಯಗಳನ್ನು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಬಹುದು ಎಂಬ ರಾಜ್ಯ ಸರ್ಕಾರದ ಲೆಕ್ಕಚಾರ ಈಗ ತಲೆಕೆಳಗಾಗಿದೆ.
ಜೂನ್ 6ರ ವರೆಗೂ ದೇಶದಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿರಲಿದ್ದು, ಕರ್ನಾಟಕದಲ್ಲೂ ಸಹ ಇದು ಅನ್ವಯವಾಗಲಿದೆ. ಹೀಗಾಗಿ ರಾಜ್ಯ ಸರ್ಕಾರ ಇನ್ನೂ ಒಂದು ತಿಂಗಳ ಕಾಲ ಅಂದರೆ ಜೂನ್ 6 ರ ವರೆಗೆ ಕಾಯಲೆಬೇಕಿದೆ.