![](https://kannadadunia.com/wp-content/uploads/2023/12/farmer-pumpset-1.jpg)
ಬೆಂಗಳೂರು : ಕೃಷಿಕರಿಗೆ ಸಿಎಂ ಸಿದ್ದರಾಮಯ್ಯ ಸಿಹಿಸುದ್ದಿ ನೀಡಿದ್ದು, ರಾಜ್ಯದ 106 ತಾಲೂಕುಗಳಲ್ಲಿ ಕೃಷಿಭಾಗ್ಯ ಯೋಜನೆಯನ್ನು ಮರುಜಾರಿ ಮಾಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, ಮುಂಬರುವ ದಿನಗಳಲ್ಲಿ ಮಳೆ ಕೊರತೆಯಾದರೂ ನಾಡಿನ ರೈತರ ಬೆಳೆಗಳಿಗೆ ನೀರಿನ ಅಭಾವ ಎದುರಾಗಬಾರದು ಎಂಬ ಸದಾಶಯದೊಂದಿಗೆ ರೂ. 100 ಕೋಟಿ ವೆಚ್ಚದಲ್ಲಿ ರಾಜ್ಯದ 106 ತಾಲೂಕುಗಳಲ್ಲಿ ಕೃಷಿಭಾಗ್ಯ ಯೋಜನೆಯನ್ನು ಮರುಜಾರಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕ್ಷೇತ್ರಬದು ನಿರ್ಮಾಣ, ಕೃಷಿ ಹೊಂಡ, ನೀರು ಇಂಗದಂತೆ ತಡೆಯಲು ಪಾಲಿಥಿನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ, ಕೃಷಿ ಹೊಂಡದಿಂದ ನೀರು ಎತ್ತಲು ಡಿಸೇಲ್/ ಪೆಟ್ರೋಲ್ ಪಂಪ್ಸೆಟ್ ಹಾಗೂ ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ (ತುಂತುರು ಹನಿ) ನೀರಾವರಿ ಸೇರಿದಂತೆ ನಾನಾ ಸೌಲಭ್ಯಗಳನ್ನು ನಿಯಮಾನುಸಾರ ನೀಡಲಾಗುವುದು ಎಂದು ಹೇಳಿದ್ದಾರೆ.
ಒಂದುವೇಳೆ ಸಂಬಂಧಪಟ್ಟ ತಾಲೂಕಿಗೆ / ಹೋಬಳಿಗೆ ನಿಗಧಿಪಡಿಸಿದ ಗುರಿಗಿಂತ ಹೆಚ್ಚು ಅರ್ಜಿಗಳು ಸ್ವೀಕೃತವಾದರೆ ಲಾಟರಿ ಎತ್ತುವ ಮೂಲಕ ಫಲಾನುಭವಿಗಳನ್ನು ಗುರಿಗಳನ್ವಯ ಆಯ್ಕೆಮಾಡಲಾಗುವುದು. ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಮಳೆ ನೀರನ್ನು ಸಂಗ್ರಹಿಸಿ ಬೆಳೆಗಳ ಸಂದಿಗ್ದ ಹಂತದಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಕೃಷಿ ಭಾಗ್ಯ ಯೋಜನೆಯ ಉದ್ದೇಶವಾಗಿದೆ.