ಬೆಂಗಳೂರು : ಬೆಂಗಳೂರಿನಲ್ಲಿ ಸಿಎಂ ಜನತಾ ದರ್ಶನ ಕಾರ್ಯಕ್ರಮ ನಡೆಯುತ್ತಿದ್ದು, ಅನಾರೋಗ್ಯ ಪೀಡಿತ ವ್ಯಕ್ತಿಗೆ ಸಿದ್ದರಾಮಯ್ಯ ಸ್ಥಳದಲ್ಲೇ 4 ಲಕ್ಷ ಪರಿಹಾರ ಮಂಜೂರು ಮಾಡಿದ್ದಾರೆ.
ರಾಮನಗರ ಜಿಲ್ಲೆಯ ವಿಜಯಕುಮಾರ್ ಬಿನ್ ನರಸಿಂಹಮೂರ್ತಿ ಎಂಬುವವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಆರ್ಥಿಕ ಸಮಸ್ಯೆಯಿಂದಾಗಿ ತಮಗೆ ಕಿಡ್ನಿ ಕಸಿ ಚಿಕಿತ್ಸೆ ಪಡೆಯಲು ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿಗಳ ಬಳಿ ಅಳಲು ತೋಡಿಕೊಂಡರು.
ವಿಜಯಕುಮಾರ್ ಅವರ ಸಂಕಷ್ಟಕ್ಕೆ ತಕ್ಷಣಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, 4 ಲಕ್ಷ ರೂ.ಗಳ ಧನಸಹಾಯವನ್ನು ಸ್ಥಳದಲ್ಲಿಯೇ ಮಂಜೂರು ಮಾಡಿ, ನೊಂದ ವ್ಯಕ್ತಿಯ ಜೀವನದಲ್ಲಿ ಭರವಸೆ ಮೂಡಿಸಿದರು.
ಆಡಳಿತ ಜನರ ಬಳಿಗೆ ಹೋಗಬೇಕು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖುದ್ದಾಗಿ ಅಹವಾಲುಗಳನ್ನು ಆಲಿಸಿ ಪರಿಹಾರ ಒದಗಿಸುವ ಸಲುವಾಗಿ ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದಾರೆ.