ಡಬ್ಲಿನ್: ಡಬ್ಲಿನ್ ಸಿಟಿ ಸೆಂಟರ್ನ ರಸ್ತೆಯಲ್ಲಿರುವ ಶಾಲೆಯೊಂದರ ಬಳಿ ಚಾಕು ದಾಳಿ ನಡೆಸಲಾಗಿದ್ದು, ಮೂವರು ಮಕ್ಕಳು ಸೇರಿದಂತೆ ಐದು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಬ್ಲಿನ್ ಪೊಲೀಸರು ಗುರುವಾರ ಹೇಳಿದ್ದಾರೆ.
ಐರ್ಲೆಂಡ್ನ ರಾಜಧಾನಿ ಡಬ್ಲಿನ್ನಲ್ಲಿ ಶಾಲೆಯ ಹೊರಭಾಗ ಮೂವರು ಮಕ್ಕಳಿಗೆ ಚಾಕು ಇರಿದಿರುವ ಘಟನೆ ನಡೆದಿದೆ. ಈ ಹಿನ್ನೆಲೆ ಪ್ರತಿಭಟನಾಕಾರರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಐದು ವರ್ಷದ ಬಾಲಕಿ ಹಾಗೂ 30ರ ಹರೆಯದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಹಿನ್ನೆಲೆ ಡಬ್ಲಿನ್ ನಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಓ’ಕಾನ್ನೆಲ್ ಸ್ಟ್ರೀಟ್ ನ ಮುಖ್ಯ ರಸ್ತೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ವಲಸೆ ವಿರೋಧಿ ಪ್ರತಿಭಟನಾಕಾರರ ನಡುವಿನ ಘರ್ಷಣೆಯ ನಂತರ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಲಾಯಿತು.
ಡೇನಿಯಲ್ ಒ’ಕಾನ್ನೆಲ್ ಪ್ರತಿಮೆಯ ಮುಂದೆ ಡಬಲ್ ಡೆಕ್ಕರ್ ಬಸ್ ಅನ್ನು ಸುಟ್ಟುಹಾಕಲಾಗಿದೆ ಮತ್ತು ಹತ್ತಿರದ ಹಾಲಿಡೇ ಇನ್ ಹೋಟೆಲ್ ಮತ್ತು ಮೆಕ್ಡೊನಾಲ್ಡ್ ರೆಸ್ಟೋರೆಂಟ್ನಲ್ಲಿ ಕಿಟಕಿಗಳನ್ನು ಪುಡಿಮಾಡಲಾಗಿದೆ. ಫುಟ್ ಲಾಕರ್ ಅಂಗಡಿಯನ್ನು ಪುಡಿ ಪುಡಿ ಮಾಡಲಾಗಿದೆ.
ಗಂಭೀರ ಹಿಂಸಾಚಾರದಲ್ಲಿ ತೊಡಗಿರುವ ಬಲಪಂಥೀಯ ಸಿದ್ಧಾಂತದಿಂದ ಪ್ರೇರಿತವಾದ ಸಂಪೂರ್ಣ ಹುಚ್ಚ, ಗೂಂಡಾ ಬಣವನ್ನು ನಾವು ಹೊಂದಿದ್ದೇವೆ” ಎಂದು ಪೊಲೀಸ್ ಆಯುಕ್ತ ಡ್ರೂ ಹ್ಯಾರಿಸ್ ಹೇಳಿದ್ದಾರೆ. ಸಾರ್ವಜನಿಕ ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು 400 ಅಧಿಕಾರಿಗಳನ್ನು ನಿಯೋಜಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.