ಆಂಧ್ರಪ್ರದೇಶದ ಸಿಎಂ ಆಗಿ ಚಂದ್ರಬಾಬು ನಾಯ್ಡು ಹಾಗೂ ಡಿಸಿಎಂ ಆಗಿ ಪವನ್ ಕಲ್ಯಾಣ್ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದರು.
ಕೃಷ್ಣ ಜಿಲ್ಲೆಯ ಗನ್ನವರಂ ವಿಮಾನ ನಿಲ್ದಾಣದ ಬಳಿಯ ಕೇಸರಪಲ್ಲಿ ಐಟಿ ಪಾರ್ಕ್ ನಲ್ಲಿ ಬುಧವಾರ ನಡೆದ ಭವ್ಯ ಸಮಾರಂಭದಲ್ಲಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಮತ್ತು ಜನಸೇನಾ ಪಕ್ಷದ (ಜೆಎಸ್ಪಿ) ಮುಖ್ಯಸ್ಥ ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ನಾಯ್ಡು ಮತ್ತು ಕಲ್ಯಾಣ್ ಅವರಿಗೆ ರಾಜ್ಯಪಾಲ ಎಸ್ ಅಬ್ದುಲ್ ನಜೀರ್ ಪ್ರಮಾಣ ವಚನ ಬೋಧಿಸಿದರು. ನಾಯ್ಡು ಅವರ ಪುತ್ರ ಮತ್ತು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್, ಟಿಡಿಪಿಯ ಆಂಧ್ರಪ್ರದೇಶ ಘಟಕದ ಮುಖ್ಯಸ್ಥ ಕೆ.ಅಚ್ಚಣ್ಣನಾಯ್ಡು ಮತ್ತು ಜನಸೇನಾ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ನಾದೆಂಡ್ಲಾ ಮನೋಹರ್ ಸೇರಿದಂತೆ 24 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
ಈ ಭವ್ಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರು ಮತ್ತು ಇತರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ನಾಯಕರು ಭಾಗವಹಿಸಿದ್ದರು.ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ಸೂಪರ್ ಸ್ಟಾರ್ ಗಳಾದ ರಜನಿಕಾಂತ್ ಮತ್ತು ಚಿರಂಜೀವಿ ಉಪಸ್ಥಿತರಿದ್ದರು.