ಕೋಲ್ಕತಾ: ಪಶ್ಚಿಮ ಬಂಗಾಳದ ಸಂದೇಶ್ಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್ ಮುಖಂಡ ಶೇಖ್ ಶಹಜಹಾನ್ ಬಂಧನಕ್ಕೆ ಯಾವುದೇ ತಡೆ ಇಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.
ಸ್ವಯಂಪ್ರೇರಿತ ಪ್ರಕರಣದಲ್ಲಿ ಟಿಎಂಸಿ ನಾಯಕ ಶಹಜಹಾನ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಯೊಂದಿಗೆ ಕಕ್ಷಿದಾರರನ್ನಾಗಿ ಸೇರಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ನಿರ್ದೇಶನ ನೀಡಿದ್ದಾರೆ.
ತೃಣಮೂಲ ನಾಯಕ ಶೇಖ್ ಬಂಧನಕ್ಕೆ ತಡೆಯಾಜ್ಞೆ ಇದೆ ಎಂದು ಪೊಲೀಸರಿಗೆ ಅಂತಹ ಯಾವುದೇ ಸೂಚನೆ ನೀಡಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೋಮವಾರ ಹೇಳಿದ್ದಾರೆ.
ಪ್ರಕರಣದ ವಿಚಾರಣೆಯ ಸಮಯದಲ್ಲಿ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತು ಇಬ್ಬರು ಬಂಗಾಳ ಸಚಿವರು ನೀಡಿದ ಹೇಳಿಕೆಗಳ ಬಗ್ಗೆಯೂ ನ್ಯಾಯಾಲಯ ಚರ್ಚಿಸಿತು. ಅಭಿಷೇಕ್ ಬ್ಯಾನರ್ಜಿ ಅವರ ಹೇಳಿಕೆಯ ಬಗ್ಗೆ ಸಿಜೆಐ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. “ಶಹಜಹಾನ್ ಶೇಖ್ ಕಾಣೆಯಾಗಿರುವುದರಿಂದ ಪತ್ರಿಕೆಯಲ್ಲಿ ಸಾರ್ವಜನಿಕ ನೋಟಿಸ್ ನೀಡುವಂತೆ ನಾವು ರಿಜಿಸ್ಟ್ರಾರ್ಗೆ ನಿರ್ದೇಶನ ನೀಡುತ್ತೇವೆ” ಎಂದು ನ್ಯಾಯಾಲಯ ಹೇಳಿದೆ.