ಬೆಂಗಳೂರು : ವಾಲ್ಮೀಕಿ ನಿಗಮದ ಹಗರಣ ಪ್ರಕರಣ, ಮುಡಾ ಹಗರಣ ವಿಪಕ್ಷಗಳಿಗೆ ಟೀಕಾಸ್ತ್ರವಾಗಿದೆ. ಎಲ್ಲಾ ಹಗರಣವನ್ನು ಖಂಡಿಸಿ ಜುಲೈ 15 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ನಿರ್ಧರಿಸಿದೆ.
ಜುಲೈ 15ರಂದು ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನಾ ಸಭೆ ನಡೆಸಲಿರುವ ಬಿಜೆಪಿ ನಾಯಕರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧಾರ ಮಾಡಿದ್ದಾರೆ. ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ತಾವೊಬ್ಬ ದಲಿತೋದ್ಧಾರಕ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಸಿಎಂ ಸಿದ್ದರಾಮಯ್ಯನವರು, ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ 24 ಸಾವಿರ ಕೋಟಿಗೂ ಅಧಿಕ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಶೋಷಿತ ಸಮುದಾಯಕ್ಕೆ ದ್ರೋಹ ಬಗೆದಿದ್ದಾರೆ. ದಲಿತರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಧಿವೇಶನದಲ್ಲಿ ಹೋರಾಟ ನಡೆಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಬಿ.ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್ ಅವರ ಖಾತೆಗೆ ನಿಗಮದ 80 ಲಕ್ಷ ರೂ. ನೇರವಾಗಿ ವರ್ಗಾವಣೆಯಾಗಿದೆ. ವಾಲ್ಮೀಕಿ ಸಮುದಾಯದ ಹಣ ನುಂಗಿದವರನ್ನು ಹಾಗೂ ಹಗರಣದ ಮೂಲ ಸೂತ್ರಧಾರರು ಯಾರೇ ಇದ್ದರೂ ಶೀಘ್ರವೇ ಬಂಧಿಸಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಕೂಡ ಆಗ್ರಹಿಸಿದ್ದಾರೆ.