ಬೆಂಗಳೂರು: ಪ್ರವಾಹದ ಸಂಕಷ್ಟದಲ್ಲಿ ರಾಜ್ಯದ ಜನತೆ ನಲುಗುತ್ತಿರುವಾಗ ಬಿಜೆಪಿ ಸರ್ಕಾರ ಜನೋತ್ಸವದ ಹೆಸರಲ್ಲಿ ನಡೆಸುತ್ತಿರುವ ಸಮಾವೇಶದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಬಿಜೆಪಿ ಆಡಳಿತದಲ್ಲಿ ಸರ್ಕಾರದ ಸ್ಪಂದನೆ ಇಲ್ಲದೆ “ಜನರ ರೋಧನೆ” ನಡೆಯುತ್ತಿದೆ. ಸಚಿವರಾದ ಅರವಿಂದ್ ಲಿಂಬಾವಳಿ, ಮಾಧುಸ್ವಾಮಿಯಂತವರಿಂದ
“ಜನರ ನಿಂದನೆ” ನಡೆಯುತ್ತಿದೆ. ನೆರೆ, ಪ್ರವಾಹ, ಬೆಲೆ ಏರಿಕೆಯಂತವುಗಳಿಂದ “ಜನರ ವೇದನೆ” ನೋಡುತ್ತಿದ್ದೇವೆ. ಇಂತಹ ಸದರ್ಭದಲ್ಲಿ ಯಾವ ಸಾಧನೆ ಹೇಳಿಕೊಳ್ಳಲು ಸಮಾವೇಶ ನಡೆಸುತ್ತಿದ್ದೀರಿ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸರ್ಕಾರ ಪರ್ಸೆಂಟೇಜ್ ಮೇಲೆ ನಡೆಯುತ್ತಿದೆಯೇ? ಗುತ್ತಿಗೆದಾರರು, ಜನಸಾಮಾನ್ಯರ ನಂತರ ಹೈಕೋರ್ಟ್ ಕೂಡ 40% ಸರ್ಕಾರದ ಪರ್ಸೆಂಟೇಜ್ ಬಗ್ಗೆ ಮಾತಾಡುತ್ತಿದೆ. ಬಿಜೆಪಿ ಬ್ರಷ್ಟೋತ್ಸವದ ಇಂತಹ ನಾಚಿಕೆಗೇಡಿನ ಸಂಗತಿ ಎದುರಿಟ್ಟುಕೊಂಡು ಯಾವ ಪುರುಷಾರ್ಥಕ್ಕೆ ಸಮಾವೇಶ ನಡೆಸುತ್ತಿದ್ದೀರಿ? ನಾಡಿನ ಎದುರು ತಲೆ ತಗ್ಗಿಸಬೇಕಾದ ಸಮಯವಿದು. ಬಿಜೆಪಿ ನಡೆಸುತ್ತಿರುವುದು ಜನಸ್ಪಂದನ ಸಮಾವೇಶವಲ್ಲ “ಕಮಿಷನ್ ಸಮಾವೇಶ” 40% ಕಮಿಷನ್ ಲೂಟಿಯ ಪಾಪದ ಹಣದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಯಾವ ಸಾಧನೆ ಹೇಳಿಕೊಳ್ಳುವಿರಿ ಸಿಎಂ ಬೊಮ್ಮಾಯಿ ಅವರೇ? ನಿಮ್ಮದೇ ಪಕ್ಷದ ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂತೋಷ್ ಪಾಟೀಲ್‌ರನ್ನು ಕಮಿಷನ್ ಕಿರುಕುಳದಲ್ಲಿ ಕೊಂದಿದ್ದನ್ನು ಹೇಳಿಕೊಳ್ಳುವಿರಾ? ಅಕ್ರಮಗಳನ್ನು ಮುಚ್ಚಿಕೊಳ್ಳುವುದೇ ಸಾಧನೆ ಎಂದು ಹೇಳುತ್ತೀರಾ? ಸರ್ಕಾರದ ಸಾಧನೆಯನ್ನು ಏನೆಂದು ಹೇಳಿಕೊಳ್ಳುತ್ತೀರಿ? ಎಂದು ಕಿಡಿ ಕಾರಿದೆ.
ಇದೇ ವೇಳೆ ಬಿಜೆಪಿ ಸಚಿವರು, ಶಾಸಕರು ಜನೋತ್ಸವ ಸಮಾವೇಶದಲ್ಲಿ ಡಾನ್ಸ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿರುವ ಕಾಂಗ್ರೆಸ್, ಯಾವ ಕಾರಣಕ್ಕಾಗಿ ಈ ಸಂತೋಷ, ಸಡಗರ, ಸಂಭ್ರಮ…? ಅತಿವೃಷ್ಟಿಯಲ್ಲಿ ಜನರ ಬದುಕು ಮುಳುಗಿರುವುದಕ್ಕಾ…? ಆತ್ಮಹತ್ಯೆಯಲ್ಲಿ ಕರ್ನಾಟಕ 5ನೇ ಸ್ಥಾನ ಪಡೆದಿರುವುದಕ್ಕಾ…? ಸರ್ಕಾರಿ ಹುದ್ದೆಗಳು ಲಾಭದಾಯಕವಾಗಿ ಸೇಲ್ ಆಗಿರುವುದಕ್ಕಾ…? 40% ಕಮಿಷನ್ ಲೂಟಿಯನ್ನು ಯಶಸ್ವಿಯಾಗಿ ಮಾಡುತ್ತಿರುವುದಕ್ಕಾ…? ಎಂದು ಸರಣಿ ಟ್ವೀಟ್ ಮೂಲಕ ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದೆ.