ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ.
ಈ ಬಗ್ಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದು, ಪ್ರಕರಣ ಸಂಬಂಧ ಮುಖ್ಯ ಆರೋಪಿಗಳ ಬಂಧನವಾಗಬೇಕಿದೆ. ಈಗಾಗಲೇ ಬಂಧಿತರಾಗಿರುವ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಪ್ರಕ್ರಿಯೆ ನಡೆದಿದೆ. ಮುಖ್ಯ ಆರೋಪಿಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಕಾರ ನೀಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರವೀಣ್ ನೆಟ್ಟಾರು ಹತ್ಯೆಯ ಪ್ರಮುಖ ಆರೋಪಿಗಳ ಬಗ್ಗೆ ಈಗಾಗಲೇ ಮಾಹಿತಿ ಸಿಕ್ಕಿದ್ದು, ಅವರ ಫೋಟೋ, ಮನೆ ವಿಳಾಸ, ತಂದೆ-ತಾಯಿ, ಹೆಂಡತಿ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿದೆ. ಆರೋಪಿಯನ್ನು ಬಚ್ಚಿಡುವ ಕೆಲಸ ನಡೆಯುತ್ತಿದ್ದು, ಆಗಾಗ ಆರೋಪಿ ಸ್ಥಳ ಬದಲಾವಣೆ ಮಾಡುತ್ತಿದ್ದಾನೆ. ಪೊಲೀಸರು ದಾಳಿ ನಡೆಸುವಷ್ಟರಲ್ಲಿ ಆರೋಪಿಗಳು ಪರಾರಿಯಾಗುತ್ತಿದ್ದಾರೆ ಎಂದು ಹೇಳಿದರು.